ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಾದ ಹುಳಿ ಹಣ್ಣನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಬಿಳಿ ನೆಲೆಯ ವಾಸ್ತು ತಜ್ಞ ಎಸ್ ಪ್ರಸಾದ್ ಮುನಿಯಂಗಳ ಅವರು ಬೆಳೆಸಿದ್ದು, ಇದೀಗ ಗಿಡಗಳಲ್ಲಿ ಹಣ್ಣು ಬಿಟ್ಟಿದೆ.
ಪಶ್ಚಿಮ ಘಟ್ಟಗಳ ಅಪರೂಪದ ಕಾಡು ಹಣ್ಣಾದ ಹುಳಿ ಹಣ್ಣನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪ ಬಿಳಿ ನೆಲೆಯ ವಾಸ್ತು ತಜ್ಞ ಎಸ್ ಪ್ರಸಾದ್ ಮುನಿಯಂಗಳ ಅವರು ಬೆಳೆಸಿದ್ದು, ಇದೀಗ ಗಿಡಗಳಲ್ಲಿ ಹಣ್ಣು ಬಿಟ್ಟಿದೆ.
ಮುನಿಯಂಗಳ ಅವರು ಮೂರು ವರ್ಷಗಳ ಹಿಂದೆ 100ಕ್ಕೂ ಮಿಕ್ಕಿ ಹಣ್ಣಿನ ಗಿಡಗಳನ್ನು ನರ್ಸರಿಯಿಂದ ತಂದು ಗಿಡದಿಂದ ಗಿಡಕ್ಕೆ ಹತ್ತು ಅಡಿ ಅಂತರದಲ್ಲಿ ನಾಟಿ ಮಾಡಿದ್ದರು. ಹೆಚ್ಚಿನ ಆರೈಕೆ ಬೇಡದೆ, ಚೆನ್ನಾಗಿ ಜೂನ್, ಜುಲೈ ತಿಂಗಳಲ್ಲಿ ಫಲ ಭರಿತ ಹಣ್ಣುಗಳು ಕಾಣಿಸಿಕೊಂಡಿದೆ. ಒಂದು ಗೊಂಚಲಿನಲ್ಲಿ 25 -50 ಹಣ್ಣುಗಳನ್ನು ಹೊಂದಿದ್ದು ಅತ್ಯಾಕರ್ಷಕ ಬಣ್ಣವೂ ಇದೆ.ಆರೋಗ್ಯಕ್ಕೆ ಹಿತ: ಹುಳಿ ಹಣ್ಣಿನಲ್ಲಿ ಸಿ - ವಿಟಮಿನ್ ಹೇರಳವಾಗಿದ್ದು ಕಣ್ಣಿನ ದೃಷ್ಟಿಗೆ ಉತ್ತಮವಾಗಿದ್ದು, ಫೈಬರ್ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಬೀಮ್ ಪುರುಳಿ ಅಂಜೂರ ಅತ್ತಿ ಹಣ್ಣುಗಳಂತೆ ಕಾಡು ಹಣ್ಣು, ಕಡಿಮೆ ಕ್ಯಾಲರಿ ಹೊಂದಿದ್ದು ತೂಕವನ್ನು ಇಳಿಸಲು ಸಹಾಯವಾಗುತ್ತದೆ ಅಲ್ಲದೆ ಸಾರು, ಉಪ್ಪಿನಕಾಯಿ ಮುಂತಾದ ಆಹಾರಗಳನ್ನು ತಯಾರಿಸಲಾಗುತ್ತಿದ್ದು ಪೊಟ್ಯಾಶಿಯಂ ಚೆನ್ನಾಗಿ ಕೊಟ್ಟಾಗ ಇನ್ನಷ್ಟು ಸಿಹಿ ಗುಣವನ್ನು ಹೊಂದುತ್ತದೆ.
ವಿವಿಧ ಹೆಸರು: ಈ ಅಪರೂಪದ ಕಾಡು ಹಣ್ಣನ್ನು ಕನ್ನಡದಲ್ಲಿ ಕೋಳಿಜುಟ್ಟು ಹಣ್ಣು (Koli juttu hannu), ಕೋಳಿ ಕುಕ್ಕೆ (Koli Kukke) ಅಥವಾ ಮೈಂದಪುಳಿ (Mayndapuli) ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Baccaurea courtallensis. ಮಲಯಾಳಂನಲ್ಲಿ ಇದನ್ನು ಮೂಟ್ಟಿಪಳಂ (Mootipazham) ಅಥವಾ ಮೂಟ್ಟಿಪುಳಿ ಎಂದು ಕರೆಯಲಾಗುತ್ತದೆ.
ಕಾಂಡದಲ್ಲಿ ಹಣ್ಣು: ಕೋಳಿ ಕುಕ್ಕೆ ಮರದ ಹಣ್ಣುಗಳು ಕೊಂಬೆಗಳಲ್ಲಲ್ಲದೆ ನೇರವಾಗಿ ಮರದ ಪ್ರಮುಖ ಕಾಂಡದ ಮೇಲೆಯೇ ಬಿಡುತ್ತವೆ. ಮಧ್ಯಮ ಗಾತ್ರದಲ್ಲಿ ಅಂದರೆ ಸುಮಾರು ೧೦ ರಿಂದ ೧೮ ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುವ ಈ ಮರದ ಬೂದು ಬಣ್ಣದ ತೊಗಟೆಯ ಮೇಲೆ ಸಣ್ಣ ಸಣ್ಣ ಗಂಟುಗಳಂತಹ ರಚನೆಗಳಿರುತ್ತವೆ. ಆಗಸ್ಟ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಈ ಮರಗಳು ಹೂ ಬಿಡಲು ಆರಂಭಿಸುತ್ತವೆ. ಮೊದಲು ರಕ್ತಗೆಂಪು ಬಣ್ಣದ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಕಾಂಡದಿಂದ ಹೊರಬರುತ್ತವೆ. ಗಂಡು ಹೂಗೊಂಚಲುಗಳು ಇಡೀ ಕಾಂಡದಾದ್ಯಂತ ಹರಡಿಕೊಂಡಿದ್ದರೆ, ಹೆಣ್ಣು ಹೂಗೊಂಚಲುಗಳು ಹೆಚ್ಚಾಗಿ ಕಾಂಡದ ಬುಡಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ದಟ್ಟವಾದ ಕ್ರಿಮ್ಸನ್ (ಗಾಢ ಕೆಂಪು) ಬಣ್ಣದ ದೊಡ್ಡ ಹಣ್ಣಿನ ಗೊಂಚಲುಗಳಾಗಿ ಬದಲಾಗಿ, ಇಡೀ ಮರದ ಬುಡವನ್ನು ಕೆಂಪು ಹಾಸಿನಂತೆ ಕಂಗೊಳಿಸುವಂತೆ ಮಾಡುತ್ತವೆ.
ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ಹೆಮ್ಮೆ: ಕೋಳಿ ಕುಕ್ಕೆ ಮರವು ಕೇವಲ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಮಳೆಕಾಡುಗಳಿಗೆ ಮಾತ್ರ ಸೀಮಿತವಾದ (Endemic) ಅಪರೂಪದ ತಳಿಯಾಗಿದೆ. ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಹಿಡಿದು ಕೇರಳ ಮತ್ತು ತಮಿಳುನಾಡಿನ ಕನ್ಯಾಕುಮಾರಿಯವರೆಗಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ಇವು ನೈಸರ್ಗಿಕವಾಗಿ ಬೆಳೆಯುತ್ತವೆ. ಸೀಮಿತ ಪರಿಸರ ಮತ್ತು ಅರಣ್ಯ ನಾಶದ ಕಾರಣದಿಂದಾಗಿ, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘ (IUCN) ತನ್ನ ಕೆಂಪು ಪಟ್ಟಿಯಲ್ಲಿ ಇದನ್ನುಅಳಿವಿನಂಚಿನಲ್ಲಿರುವ ತಳಿ (Near Threatened) ಎಂದು ವರ್ಗೀಕರಿಸಿದೆ.5 ವರ್ಷ ಬೇಕು: ಬೀಜದಿಂದ ಅಥವಾ ಕಸಿ (Grafting) ಮಾಡಿದ ಗಿಡಗಳನ್ನು ನೆಟ್ಟರೆ, ಅವು ಕಾಂಡದ ಮೇಲೆ ಹಣ್ಣು ಬಿಡಲು ಸುಮಾರು ೪ ರಿಂದ ೬ ವರ್ಷಗಳು ಬೇಕಾಗುತ್ತವೆ. ಪಶ್ಚಿಮ ಘಟ್ಟದ ಇಂತಹ ಅಪರೂಪದ ಸಸ್ಯಸಂಕುಲದ ರಕ್ಷಣೆ ಅಗತ್ಯವಾಗಿದೆ. ಚಿತ್ರ ಬರಹ: ಕುಮಾರ್ ಪೆರ್ನಾಜೆ ಪೆರ್ನಾಜೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.