ಜೀವಮಾನದ ಕಲಾಶ್ರೇಷ್ಠ ಸಾಧಕರ ಪ್ರಶಸ್ತಿಗೆ ನಾಡೋಜ ಡಾ.ವಿ.ಟಿ. ಕಾಳೆ ಆಯ್ಕೆ

KannadaprabhaNewsNetwork |  
Published : Mar 31, 2026, 02:15 AM IST
ಡಾ. ವಿ.ಟಿ. ಕಾಳೆಯವರು ಚಿತ್ರಿಸಿರುವ ವರ್ಣಚಿತ್ರಗಳು. | Kannada Prabha

ಸಾರಾಂಶ

ಬೆಂಗಳೂರಿನ ಕರ್ನಾಟಕ ಇಂಟರ್‌ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್‌ನ 2026ನೇ ಸಾಲಿನ ಜೀವಮಾನದ ಕಲಾಶ್ರೇಷ್ಠ ಸಾಧಕರ ಪ್ರಶಸ್ತಿಗೆ ಸಂಡೂರಿನ ಖ್ಯಾತ ಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ ಆಯ್ಕೆಯಾಗಿದ್ದಾರೆ.

ಸಂಡೂರು: ಬೆಂಗಳೂರಿನ ಕರ್ನಾಟಕ ಇಂಟರ್‌ನ್ಯಾಷನಲ್ ಆರ್ಟಿಸ್ಟ್ ವಿಲೇಜ್ ಚಾರಿಟೇಬಲ್ ಟ್ರಸ್ಟ್‌ನ 2026ನೇ ಸಾಲಿನ ಜೀವಮಾನದ ಕಲಾಶ್ರೇಷ್ಠ ಸಾಧಕರ ಪ್ರಶಸ್ತಿಗೆ ಸಂಡೂರಿನ ಖ್ಯಾತ ಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ ಆಯ್ಕೆಯಾಗಿದ್ದಾರೆ.

ಡಾ. ವಿ.ಟಿ. ಕಾಳೆಯವರ ಸಾಧನೆಯ ಕಿರೀಟಕ್ಕೆ ಈ ಪ್ರಶಸ್ತಿಯ ಮೂಲಕ ಮತ್ತೊಂದು ಗರಿ ಸೇರಿದಂತಾಗಿದೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಮಾ. 31ರ ಮಂಗಳವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿದು ಬಂದಿದೆ.

1934ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದ ವಿ.ಟಿ. ಕಾಳೆಯವರು ಹುನಗುಂದ ಹಾಗೂ ಗದುಗಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು, ಗದುಗಿನ ವಿಜಯ ಕಲಾ ಮಂದಿರದಲ್ಲಿ ದಿ. ಟಿ.ಪಿ ಅಕ್ಕಿಯವರ ಮಾರ್ಗದರ್ಶನದಲ್ಲಿ ಉಚ್ಚ ಕಲಾ ಶಿಕ್ಷಣಾರ್ಜನೆ ಮಾಡಿ, 1952ರಲ್ಲಿ ಮುಂಬೈಯಿಯ ಸರ್ ಜೆ.ಜೆ. ಕಲಾ ಶಾಲೆಯಿಂದ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರು.1952ರಿಂದ 1964ರ ವರೆಗೆ ಗದುಗಿನ ವಿಜಯ ಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಕರಾಗಿ, 1964ರಿಂದ 1992ರ ವರೆಗೆ ಸಂಡೂರಿನ ವಸತಿ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಪಠ್ಯ ಪುಸ್ತಕಗಳ ಕಲಾವಿದ ಸದಸ್ಯರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಧಾರವಾಡದ ಕರ್ನಾಟಕ ಆರ್ಟ್ ಸೊಸೈಟಿಯ ಸದಸ್ಯರಾಗಿ, ಬೆಂಗಳೂರು, ಹಂಪಿ ಮುಂತಾದೆಡೆ ನಡೆದ ಕಲಾ ಶಿಬಿರಗಳಲ್ಲಿ ಕಲಾವಿದರಾಗಿ ದೇಶದ ವಿವಿಧೆಡೆ ನಡೆದ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯೋತ್ಸವ, ನಾಡೋಜ, ಗೌರವ ಡಾಕ್ಟರೇಟ್, ಅಮೋಘವರ್ಷ ನೃಪತುಂಗ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರ ಸಾಧನೆಯ ಕಿರೀಟ ಅಲಂಕರಿಸಿವೆ.

ಸಾಹಿತ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಇವರು ಭಕ್ತ ಕನಕದಾಸ, ಸಂತ ಕಬೀರದಾಸ, ದಶಾವತಾರ ಗೀತ ರೂಪಕ, ಬುದ್ಧಂ ಶರಣಂ ಗಚ್ಛಾಮಿ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಐತಿಹಾಸಿಕ, ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ನಟರಾಗಿ ಚಿಕ್ಕಮ್ಮ, ವಿಜಯನಗರ ಸಾಮ್ರಾಜ್ಯ, ಕಣ್ಣಿಗೆ ಮಣ್ಣು ಮುಂತಾದ ನಾಟಕಗಳಲ್ಲಿ, ಸಂಗೊಳ್ಳಿ ರಾಯಣ್ಣ, ಮಾನಸವೀಣೆ ಮುಂತಾದ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಇವರು ಚಿತ್ರಸಿದ ವಚನ ರಚನಾ ನಿರತ ಬಸವಣ್ಣನವರ ಕಲಾಕೃತಿಯನ್ನು ರಾಜ್ಯ ಸರ್ಕಾರವು ಅಧಿಕೃತವೆಂದು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ಸೂಚಿಸಿದೆ. ಇವರ ಕಲಾಕೃತಿಗಳು ದೇಶ ವಿದೇಶಗಳ ಕಲಾ ಗ್ಯಾಲರಿಗಳಲ್ಲಿ ಸ್ಥಾನವನ್ನು ಪಡೆದುಕೊಂಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಪರಂಪರೆ ಉಳಿಸಿಕೊಳ್ಳಲು ರಂಗಭೂಮಿ ಸಹಕಾರಿ: ಜೆ. ನರಸಿಂಹಮೂರ್ತಿ
ಮನುಷ್ಯರ ಕಲ್ಯಾಣಕ್ಕೆ ಜೀವನ ಮೀಸಲಿಟ್ಟ ಮಹಾವೀರ: ಷಣ್ಮುಖಪ್ಪ