ಪಡುಕರೆಯಲ್ಲಿ ಸುಮಾರು 9 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಅನ್ನು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.
ಮಲ್ಪೆ: ಇಲ್ಲಿನ ಪಡುಕರೆಯಲ್ಲಿ ಸುಮಾರು 9 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಅನ್ನು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಈ ರೆಸಾರ್ಟನ್ನು ತಾನು ಆರ್ಥಿಕ ಲಾಭಕ್ಕಾಗಿ ನಿರ್ಮಿಸಿಲ್ಲ, ಈ ಪಡುಕರೆಯಲ್ಲಿ ತನ್ನ ತಾಯಿ ಮೀನು ಮಾರುತಿದ್ದರು, ಅವರೊಂದಿಗೆ ತಾನು ಇಲ್ಲಿ ಓಡಾಡುತಿದ್ದೆ, ಇಂದು ಇದು ಯಾರೂ ಬಾರದ ಪ್ರದೇಶವಾಗಿತ್ತು, ಇಲ್ಲಿ ಮತ್ತೆ ಜನರನ್ನು ಆಕರ್ಷಿಸಬೇಕು, ಬಡತನದಲ್ಲಿ ಹುಟ್ಟಿದ ಮೀನುಗಾರನೊಬ್ಬನಿಗೆ ಈ ಸಾಧನೆ ಮಾಡುವುದಕ್ಕೆ ಸಾಧ್ಯವಿದೆ ಎಂಬುದನ್ನು ತೋರಿಸುವುದಕ್ಕೆ ಇದನ್ನು ನಿರ್ಮಿಸಿದ್ದೇನೆ ಎಂದು ನುಡಿದರು.
ಕರಾವಳಿಯ ಕೊರತೆ ನೀಗಿತು !
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಂಜುನಾಥ್ ಭಂಡಾರಿ, ಕರಾವಳಿಯಲ್ಲಿ ಸಮುದ್ರ ತೀರದಲ್ಲಿ ಐಷಾರಾಮಿ ಹೊಟೇಲ್‌ಗಳ ಕೊರತೆಯನ್ನು ಜಿ. ಶಂಕರ್ ನೀಗಿಸಿದ್ದಾರೆ ಎಂದು ಶ್ಲಾಘಿಸಿದರು.
ಮಂಗಳೂರಿನಲ್ಲಿ 70 ವರ್ಷಗಳ ನಂತರ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ನಡೆಸಬೇಕು ಎಂದು ಪ್ರಯತ್ನಿಸಲಾಗುತ್ತಿದೆ, ಆದರೆ ಇಲ್ಲಿ ಕ್ರಿಕೆಟ್ ಆಟಗಾರರು ಉಳಿದುಕೊಂಡು ವಿಶ್ರಾಂತಿ ಪಡೆಯುವುದಕ್ಕೆ ಒಳ್ಳೆಯ ಹೊಟೇಲ್ ಇಲ್ಲ ಎಂಬ ಕಾರಣಕ್ಕೆ ಅದು ಸಾಧ್ಯವಾಗುತ್ತಿಲ್ಲ, ವಿದೇಶಿ ಅತಿಥಿಗಳು ಬಂದರೆ ಸಮುದ್ರ ತೀರದ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿ ಎನ್ನುತ್ತಾರೆ, ಇದೀಗ ಈ ಸಮಸ್ಯೆಗೆ ಜಿ. ಶಂಕರ್ ಈ ರೆಸಾರ್ಟ್ ಮೂಲಕ ಪರಿಹಾರ ನೀಡಿದ್ದಾರೆ ಎಂದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು, ಶೈಕ್ಷಣಿಕ, ಧಾರ್ಮಿಕ ಮತ್ತು ಮೀನುಗಾರಿಕಾ ಕ್ಷೇತ್ರಗಳಲ್ಲಿ ಅತೀವೇಗದಿಂದ ಬೆಳೆಯುತ್ತಿರುವ ಕರಾವಳಿಗೆ ಇಂತಹ ಆತಿಥ್ಯದ ವ್ಯವಸ್ಥೆಗಳ ಅಗತ್ಯವಿದೆ. ಅದನ್ನು ಜಿ. ಶಂಕರ್ ಪೂರೈಸುತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್, ಮಾಜಿ ಶಾಸಕ ಕೆ.ರಘುಪತಿ ಭಟ್, ಮತ್ಸ್ಯೋದ್ಯಮಿ ಆನಂದ್ ಸಿ. ಕುಂದರ್, ಸಿನೆಮಾ ನಟ ರೂಪೇಶ್ ಶೆಟ್ಟಿ, ಉದ್ಯಮಿ ಮನೋಹರ ಶೆಟ್ಟಿ ಶುಭ ಹಾರೈಸಿದರು.
ಡಾ. ಜಿ. ಶಂಕರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರಮುಖರಾದ ಶಾಲಿನಿ ಶಂಕರ್, ಶ್ಯಾಮಿಲಿ ನವೀನ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಪ್ರೇಮದ ಊರಲಿ ಸಿನೆಮಾದ ನಾಯಕ ನಟ ಶ್ರೀರಾಮ್ ಮತ್ತು ನಾಯಕಿ ನಟಿ ತಪಸ್ವಿನಿ ಪುಣಚ್ಚ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಹಾರ, ಮದುವೆ, ಪಾರ್ಟಿ, ಕಾನ್ಫರೆನ್ಸ್ ಎಲ್ಲದಕ್ಕೂ ಸೈ ! ಪ್ರಶಾಂತವಾಗಿ ಹರಿಯುವ ನದಿ ಭೋರ್ಗೇರೆಯುವ ಸಮುದ್ರವನ್ನು ಸೇರುವ ಸುಂದರ ಭೂದೃಶ್ಯದ ನಡುವೆ ಲಕ್ಸುರಿ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಈ ಸಿರೆನಾ ಬೀಚ್ ರೆಸಾರ್ಟ್‌ನಲ್ಲಿ ವಿಹಾರ, ಪ್ರವಾಸ, ಮದುವೆ, ಪಾರ್ಟಿ, ಕಾರ್ಪೋರೇಟ್ ಕಾರ್ಯಕ್ರಮ ಇತ್ಯಾದಿಗಳನ್ನು ನಡೆಸುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
400 ಮಂದಿ ಕುಳಿತುಕೊಳ‍್ಳುವ ಹಾಲ್ - ಔರೇಲಿಯಾ ಬ್ಯಾಂಕ್ವೆಟ್ , ಸಿರೆನಾ ಗ್ರೀನ್ಸ್ - ಓಪನ್ ಗಾರ್ಡನ್, ಆಕರ್ಷಕ ಕಾಫಿ ಶಾಪ್ - ಕೋಸ್ಟಾ ಗ್ರಾಂಡೆ, ಸಿರೆನಾ ರಾಯಲ್ ಸೂಟ್ಸ್ - ಸಮುದ್ರಕ್ಕಭಿಮುಖ ಕೊಠಡಿಗಳು, ಸ್ಪೈಸ್ ವೇವ್ ಲಾಂಚ್ - ಬಾರ್ ಎಂಡ್ ರೆಸ್ಟೋರೆಂಟ್, ಸಿನೆರಾ ಸೆರೆನಿಟಿ - ಸ್ಪಾ ಮತ್ತು ಜಿಮ್, ಬೋರ್ಡ್ ರೂಮ್, ಕಾನ್ಫೆರೆನ್ಸ್ ಹಾಲ್, 55 ಹವಾನಿಯಂತ್ರಿತ ಡೀಲಕ್ಸ್ ರೂಮ್‌ಗಳು ಮತ್ತು 400ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಈ ರೆಸಾರ್ಟ್‌ನ ವೈಶಿಷ್ಟ್ಯಗಳಾಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.