ಶಿವಕುಮಾರ ಕುಷ್ಟಗಿ
ನಗರದ ವಿವಿಧ ಬಡಾವಣೆಗಳು, ಓಣಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಗದೇವರ ಕಟ್ಟೆ, ನಾಗರಕಲ್ಲು, ಹುತ್ತ ಹಾಗೂ ದೇವಸ್ಥಾನಗಳಿಗೆ ತೆರಳಿದ ಮಹಿಳೆಯರು, ಮಕ್ಕಳು ಭಕ್ತಿಭಾವದಿಂದ ಪೂಜೆ ಸಲ್ಲಿಸಿ ನಾಗದೇವರಿಗೆ ಹಾಲೆರೆಯುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಬೆಳಗ್ಗೆಯಿಂದಲೇ ಮನೆಗಳ ಬಾಗಿಲು ಮತ್ತು ಅಂಗಳದಲ್ಲಿ ನಾಗದೇವರ ಚಿತ್ರ ಬಿಡಿಸಿ, ಅರಿಶಿನ, ಕುಂಕುಮ, ಹೂವು, ಗಂಧ ಹಾಗೂ ಹಾಲಿನಿಂದ ಪೂಜೆ ಸಲ್ಲಿಸಲಾಯಿತು. ಮುತ್ತೈದೆಯರು ಹಾಗೂ ಹೆಣ್ಣುಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವರ ಕಟ್ಟೆಗಳಿಗೆ ತೆರಳಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಹಲವು ಕಡೆ ಸಹೋದರರ ಆಯುಷ್ಯ, ಆರೋಗ್ಯ ಹಾಗೂ ಕ್ಷೇಮಕ್ಕಾಗಿ ನಾಗದೇವರನ್ನು ಪೂಜಿಸಿದರು. ಇದನ್ನು ಅಣ್ಣ, ತಂಗಿಯರ ಹಬ್ಬವೆಂದೂ ಕರೆಯುತ್ತಾರೆ.ವಿಶೇಷ ಖಾದ್ಯ: ನಾಗರ ಪಂಚಮಿ ಸಂದರ್ಭದಲ್ಲಿ ನಾಗದೇವರಿಗೆ ಆಳ್ಳಿಟ್ಟು, ಉಸುಳಿ ಸೇರಿದಂತೆ ಸ್ಥಳೀಯ ಸಂಪ್ರದಾಯದ ವಿಶೇಷ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಲಾಯಿತು. ನೆನೆಸಿದ ಕಡಲೆ, ಎಳ್ಳು, ಶೇಂಗಾ, ಕಡಲೆಬೇಳೆ ಸೇರಿದಂತೆ ವಿವಿಧ ಧಾನ್ಯಗಳಿಂದ ತಯಾರಿಸಿದ ಉಂಡಿಗಳು, ತಂಬಿಟ್ಟು ಹಾಗೂ ಇತರ ಸಾತ್ವಿಕ ತಿನಿಸುಗಳನ್ನೂ ಕೆಲವೆಡೆ ನೈವೇದ್ಯವಾಗಿ ಸಮರ್ಪಿಸಲಾಯಿತು. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹಬ್ಬದ ದಿನ ಜೋಕಾಲಿ ಆಡುವುದು, ಮಕ್ಕಳೊಂದಿಗೆ ವಿವಿಧ ಆಟಗಳಲ್ಲಿ ಪಾಲ್ಗೊಳ್ಳುವುದು ವಿಶೇಷ ಸಂಭ್ರಮದ ಭಾಗವಾಗಿದೆ.
ಯುವಕರು ವಿವಿಧ ಗ್ರಾಮೀಣ ಮೋಜಿನಾಟಗಳಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮತ್ತಷ್ಟು ಕಳೆ ತಂದರು. ತವರು ಮನೆಗೆ ಆಗಮಿಸಿದ್ದ ಹೆಣ್ಣುಮಕ್ಕಳು ಬಂಧು-ಬಳಗದೊಂದಿಗೆ ಹಬ್ಬ ಆಚರಿಸಿದ್ದು, ಗ್ರಾಮೀಣ ಬದುಕಿನ ಸೊಗಡನ್ನು ಮತ್ತಷ್ಟು ಹೆಚ್ಚಿಸಿತು.
ವಿಶೇಷ ನಂಬಿಕೆಯೂ ಇದೆ: ನಾಗದೇವರ ಪೂಜೆಯಿಂದ ಕುಟುಂಬಕ್ಕೆ ರಕ್ಷಣೆ, ಸಂತಾನ ಸುಖ, ಆರೋಗ್ಯ ಹಾಗೂ ಸಮೃದ್ಧಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಕುಟುಂಬ ಬಾಂಧವ್ಯ, ಗ್ರಾಮೀಣ ಸಂಸ್ಕೃತಿ, ಪ್ರಕೃತಿ ಆರಾಧನೆ ಮತ್ತು ಪರಂಪರೆಯ ಆಹಾರ ಸಂಸ್ಕೃತಿಯನ್ನು ಒಟ್ಟುಗೂಡಿಸುವ ಹಬ್ಬವಾಗಿದೆ ಎನ್ನುವ ನಂಬಿಕೆ ಇದೆ.