ಬೆಂಗಳೂರು : ಅಧಿಕಾರ ಹಸ್ತಾಂತರ ತಿಕ್ಕಾಟದ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕಾಶಿಯಿಂದ ಆಗಮಿಸಿದ್ದ ನಾಗಸಾಧು ವೇದಗಿರಿ ನಾಗಾ ಬಾಬಾ ಭೇಟಿ ನೀಡಿ ಆಶೀರ್ವಾದ ನೀಡಿದ್ದಾರೆ.
ನಾಗಸಾಧು ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್ ಅವರು ದಕ್ಷಿಣೆ ನೀಡುವ ಮೂಲಕ ಗೌರವ ಸಲ್ಲಿಸಿದರು.
ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ನಾಗಸಾಧು ವೇದಗಿರಿ ನಾಗಾ ಬಾಬಾ, ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಆಶೀರ್ವಾದ ಮಾಡಿದ್ದೇನೆ. ಭಕ್ತಿ ಹೆಚ್ಚಾದಂತೆ ಅಭಿವೃದ್ಧಿ ಆಗುತ್ತದೆ. ಪರಮಾತ್ಮನ ಹಾಗೂ ಸಂತರ ಆಶೀರ್ವಾದ ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದರು.ಸಿಎಂ ತವರಲ್ಲಿ ಡಿಕೆಶಿಗೆ ಅಭಿಮಾನಿಗಳ ಜೈಕಾರ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ರಾಜ್ಯದ ಹಲವೆಡೆ ವಿಶೇಷ ಪೂಜೆ ನಡೆಸಿದ್ದಾರೆ. ವಿಶೇಷವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರಿನಲ್ಲೇ ಡಿಕೆಶಿ ಪರ ಜೈಕಾರ ಮೊಳಗುತ್ತಿದೆ.ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಮೈಸೂರಿನ ನೂರೊಂದು ಗಣಪತಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಮುಂದೆ 101 ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು. ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರು, ಕೈಯಲ್ಲಿ ಡಿಕೆಶಿ ಫೋಟೋ ಹಿಡಿದು, ‘ಆಗಲೇ ಬೇಕು, ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಲೇ ಬೇಕು’ ಎಂದು ಅಭಿಮಾನಿಗಳು ಘೋಷಣೆ ಕೂಗಿದರು.
ರಾಮನಗರದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎಟಿಎಂ ಸುನಿಲ್ ಮತ್ತು ಸಂತೋಷ್ ಬಿಳಗುಂಬ ಗ್ರಾಮದ ಬಳಿಯಿರುವ ಜಲಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಿದರು. ವಿಧಾನಸಭೆಗೆ 7 ಬಾರಿ ಪ್ರವೇಶಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ಗುರುತಿಸಿ ಹೈಕಮಾಂಡ್ ಅವರನ್ನು ಸಿಎಂ ಮಾಡಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರದಲ್ಲಿ ಒಕ್ಕಲಿಗರ ಸಂಘದ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಡಿಕೆಶಿ ಪೋಟೋ ಹಿಡಿದು, ಚಾಮರಾಜೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದು ಡಿಕೆಶಿ ಪರ ಜೈಘೋಷ ಮೊಳಗಿಸಿದರು.ಡಿಕೆಶಿಗೆ ಸಿಎಂ ಸ್ಥಾನಕ್ಕಾಗಿ ಒಕ್ಕಲಿಗರ ಸಮಾಜ ಧರಣಿ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿ ಒಕ್ಕಲಿಗ ಸಂಘದ ಕಾರ್ಯಕರ್ತರು ಸೋಮವಾರ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಸೇರಿದ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ಚುಂಚಶ್ರೀ ಗೆಳೆಯರ ಬಳಗ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು, ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿ ಉಂಟಾಗಿತ್ತು.
ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವುದಾಗಿ ಹೈಕಮಾಂಡ್ ಒಪ್ಪಂದ ಮಾಡಿತ್ತು. ಆದರೆ, ಈಗಾಗಲೇ ಎರಡೂವರೆ ವರ್ಷ ಜನಾನುರಾಗಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರು ಬಿಟ್ಟು ಕೊಡಬೇಕೆಂದು ಆಗ್ರಹಿಸಿದರು.