- ಸರ್ಕಾರಿ ಭೂಕಬಳಿಕೆ ಪ್ರಕರಣ ತನಿಖೆ ಕುಂಠಿತ; ಅಪರಾಧಿಗಳು ತಪ್ಪಿಸಿಕೊಳ್ಳಲು ಹುನ್ನಾರ
- ಎಲ್ಲಾ ಹಗರಣಗಳೂ ವಿಶೇಷ ತನಿಖಾ ತಂಡದಿಂದ ತನಿಖೆಯಾಗಲಿ: ಕೆ.ಆರ್.ರವೀಂದ್ರ
ಕನ್ನಡಪ್ರಭ ವಾರ್ತೆ ಮಂಡ್ಯನಾಗಮಂಗಲ ಸರ್ಕಾರಿ ಭೂ-ಕಬಳಿಕೆ ಪ್ರಕರಣ, ಗ್ರಾಮ ಆಡಳಿತಾಧಿಕಾರಿಗಳ ನಕಲಿ ಅಂಗವಿಕಲ ಪ್ರಮಾಣಪತ್ರ, ಕೋವಿಡ್-೧೯, ಅತಿವೃಷ್ಟಿ ಅನುದಾನದಲ್ಲಿ ೩ ಕೋಟಿ ರು. ಹಣ ದುರುಪಯೋಗ ಪ್ರಕರಣಗಳು ಜಂಟಿ ತನಿಖಾ ತಂಡದಿಂದ ದೃಢಪಟ್ಟಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಒತ್ತಾಯಿಸಿದರು.
ಲೋಕಾಯುಕ್ತ ಪೊಲೀಸರು ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ೧೧ ಜನ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಏಳು ಜನರನ್ನು ಬಂಧಿಸಿ, ಮೂವರು ನಾಪತ್ತೆಯಾಗಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಜಿಲ್ಲೆಯ ಪೊಲೀಸ್ ಅಧೀಕ್ಷಕರು ಈ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸುಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ಸ್ತಾವನೆ ಸಲ್ಲಿಸಿದ್ದು, ಪೊಲೀಸ್ ಮಹಾನಿರ್ದೇಶಕರು ಮಂಡ್ಯ ಜಿಲ್ಲಾ ಪೊಲೀಸರೇ ತನಿಖೆ ನಡೆಸುವಂತೆ ವಾಪಸ್ ಕಳುಹಿಸಿದ್ದಾರೆ. ಇದೀಗ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಅಪರ ಪೊಲೀಸ್ ಅಧೀಕ್ಷಕರು ಅನಾರೋಗ್ಯದಿಂದ ಮೃತಪಟ್ಟಿದ್ದು ತನಿಖೆ ವಿಳಂಬವಾಗುತ್ತಿದೆ. ಅಪರಾಧಿಗಳು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ಆದ ಕಾರಣ ಕೂಡಲೇ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದರು.
ನಾಗಮಂಗಲ ತಾಲೂಕು ಬಗರ್‌ಹುಕುಂ ಸಕ್ರಮೀಕರಣ ಸಮಿತಿಯಲ್ಲಿ ೧.೧.೨೦೨೨ರಿಂದ ೩೦.೬.೨೦೨೩ರ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಜಮೀನು ಮಂಜೂರಾತಿ ಮಾಡಿ ಸಾಗುವಳಿ ಚೀಟಿ ನೀಡಿರುವ ಬಗ್ಗೆ ಅಂದಿನ ತಹಸೀಲ್ದಾರ್ ಎಲ್.ಎಂ.ನಂದೀಶ್ ಹಾಗೂ ಇತರರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಜಂಟಿ ವಿಚಾರಣೆಗೆ ಆದೇಶಿಸಿದ್ದಾರೆ. ಇದನ್ನೂ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಒತ್ತಾಯಿಸಿದರು.
ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್-೧೯ಗೆ ಸಂಬಂಧಿಸಿದಂತೆ ೩ ಕೋಟಿ ರು.ಗೂ ಅಧಿಕ ಹಣ ದುರುಪಯೋಗವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದಾರೆ. ತನಿಖಾ ತಂಡ ನೀಡಿರುವ ವರದಿಯಂತೆ ಹಣ ದುರುಪಯೋಗವಾಗಿರುವುದು ಕಂಡುಬಂದಿರುವುದರಿಂದ ಹಿಂದಿನ ತಹಸೀಲ್ದಾರ ಕುಂ.ಞ.ಅಹಮದ್, ಹಿಂದಿನ ಶಿರಸ್ತೇದಾರ್ ಪ್ರಕಾಶ್, ತಾಲೂಕು ಕಚೇರಿ ಶಿರಸ್ತೇದಾರ್ ಹರ್ಷ, ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಉಮಾ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನೂ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವಂತೆ ಒತ್ತಾಯಿಸಿದರು.