ಮಂಡ್ಯ ಮಂಜುನಾಥ
ನಾಗಮಂಗಲ ತಾಲೂಕು ಕಚೇರಿಯಲ್ಲಿ ನಡೆದಿರುವ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಪ್ರಕರಣ ಬಗೆದಷ್ಟೂ ಹೊರಬರುತ್ತಲೇ ಇದ್ದು, ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರ ತನಿಖಾ ವ್ಯಾಪ್ತಿಯೂ ವಿಸ್ತಾರವಾಗುತ್ತಿರುವುದರಿಂದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಇಟಿ) ಅಥವಾ ಸಿಐಡಿಗೆ ಒಪ್ಪಿಸುವ ಅಭಿಪ್ರಾಯಕ್ಕೆ ಪೊಲೀಸ್ ಇಲಾಖೆ ಬಂದಿದೆ ಎಂದು ಹೇಳಲಾಗುತ್ತಿದೆ.
ಭೂಮಿ ಮತ್ತು ದರಕಾಸ್ತು ಶಾಖೆ ಹಾಗೂ ರೆಕಾರ್ಡ್ ರೂಂನಲ್ಲಿದ್ದ ಸಾರ್ವಜನಿಕ ದಾಖಲೆಗಳನ್ನು ತಿದ್ದಿ ಸುಮಾರು ೩೦೦ ಎಕರೆಗೂ ಹೆಚ್ಚು ಜಮೀನನ್ನು ಖಾಸಗಿಯವರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದು, ಇದರಿಂದ ಸರ್ಕಾರಕ್ಕೆ ೨೦೦ ಕೋಟಿ ರು.ನಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ಲೋಕಾಯುಕ್ತ ಪೊಲೀಸರು ನಡೆಸಿದ ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿತ್ತು.ಪೊಲೀಸ್ ಇಲಾಖೆ ತನಿಖೆಯನ್ನು ಕೈಗೆತ್ತಿಕೊಂಡ ನಂತರದ ಸಮಯದಲ್ಲಿ ಸುಮಾರು ಒಂದು ಸಾವಿರ ಎಕರೆವರೆಗೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಮಂಜೂರು ಮಾಡಿರುವುದು ಕಂಡುಬಂದಿದೆ. ಇದರಿಂದ ಸರ್ಕಾರಕ್ಕೆ ಸುಮಾರು ೬೦೦ ಕೋಟಿ ರು.ಗೂ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಕಂದಾಯ, ಅರಣ್ಯ, ಪರಿಸರ ಸೇರಿದಂತೆ ಹಲವು ಇಲಾಖೆಗಳು ತನಿಖಾ ವ್ಯಾಪ್ತಿಯೊಳಗೆ ಸೇರುವುದರಿಂದ ತನಿಖಾ ವ್ಯಾಪ್ತಿ ವಿಸ್ತಾರಗೊಳ್ಳುತ್ತಲೇ ಇದೆ. ನೂರಾರು ಆರೋಪಿಗಳು ಪ್ರಕರಣದಲ್ಲಿ ಭಾಗಿ ಆಗಿರುವುದರಿಂದ ಪ್ರಕರಣವನ್ನು ಎಸ್‌ಐಟಿ ಅಥವಾ ಸಿಐಡಿ ತನಿಖೆಗೆ ವಹಿಸುವುದೇ ಸೂಕ್ತ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ತಾಲೂಕು ಇಲಾಖೆ ಅಧಿಕಾರಿಗಳು, ನೌಕರರು, ಸಿಬ್ಬಂದಿ ಜೊತೆಗೆ ಇತರೆ ಇಲಾಖೆಗಳ ನೌಕರರು, ಸಿಬ್ಬಂದಿ, ಖಾಸಗಿ ವ್ಯಕ್ತಿಗಳ ದೊಡ್ಡ ಪಟ್ಟಿಯೇ ಇದೆ. ಇದರ ಕಾರ್ಯವ್ಯಾಪ್ತಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿರುವುದರಿಂದ ತನಿಖೆಯನ್ನು ಸ್ಥಗಿತಗೊಳಿಸಿ ವಿಶೇಷ ತನಿಖಾ ತಂಡ ಇಲ್ಲವೇ ಸಿಐಡಿ ಪೊಲೀಸರಿಗೆ ತನಿಖೆಯನ್ನು ಹಸ್ತಾಂತರಿಸುವುದೇ ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆ, ಒಬ್ಬ ವಿದೇಶಕ್ಕೆ ಪರಾರಿ:
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಭೂಮಿಯನ್ನು ಮಂಜೂರು ಮಾಡಲು ಯಾವುದೇ ತೀರ್ಮಾನ ಕೈಗೊಂಡಿರುವುದಿಲ್ಲ. ಬದಲಿಗೆ ನೈಜತೆಯ ಬಗ್ಗೆ ಪರಿಶೀಲಿಸಲು ಮಾತ್ರ ತೀರ್ಮಾನ ತೆಗೆದುಕೊಂಡಿರುತ್ತದೆ. ಅದರಂತೆ ಸಾಗುವಳಿ ನೈಜತೆಯನ್ನು ಪರಿಶೀಲಿಸಿ ಪುನಃ ಸಮಿತಿಯ ಮುಂದೆ ಮಂಡಿಸಬೇಕಿತ್ತು. ಆದರೆ, ನೈಜತೆ ಪರಿಶೀಲಿಸಲು ತೆಗೆದುಕೊಂಡಿರುವ ತೀರ್ಮಾನವನ್ನೇ ಸಮಿತಿಯ ತೀರ್ಮಾನವೇ ಎಂದು ಭಾವಿಸಿ ಸರ್ಕಾರಿ ಜಮೀನನ್ನು ಕಬಳಿಸುವ ದುರುದ್ದೇಶದಿಂದ ಕಾನೂನು ಬಾಹೀರವಾಗಿ ತಹಸೀಲ್ದಾರ್ ಹಂತದಲ್ಲೇ ಕ್ರಮ ವಹಿಸಿರುವುದು ನಿಯಮಾವಳಿ ಉಲ್ಲಂಘಿಸಲಾಗಿದೆ.
ಸಾಗುವಳಿ ನೈಜತೆಯ ಬಗ್ಗೆ ಪರಿಶೀಲಿಸಲು ಬಗರ್ ಹುಕುಂ ಸಕ್ರಮೀಕರಣ ಸಮಿತಿ ತೀರ್ಮಾನಿಸಿರುವುದಾಗಿ ನಮೂದಿಸಿದ್ದರೂ ಈ ಪ್ರಕರಣಗಳಲ್ಲಿ ಸಭಾ ನಿರ್ಣಯ ಕಾಲಂನಲ್ಲಿ ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಯವರ ಸಹಿ ಮತ್ತು ಷರಾ ಇಲ್ಲದಿದ್ದರೂ ತಹಸೀಲ್ದಾರ್‌ರವರು ಷರಾ ನಮೂದಿಸಿ ಮಂಜೂರಾತಿಗೆ ಕ್ರಮ ವಹಿಸಿರುವುದು ಕಂಡುಬಂದಿದೆ.
ಹಿಂದಿನ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸಭೆಯಲ್ಲಿ ವಜಾ ಮಾಡಿರುವ ಅರ್ಜಿಗಳನ್ನು ಯಾವುದೇ ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಸಭೆಯಲ್ಲಿ ಮಂಡಿಸಿ ಸಮಿತಿಯು ಅರ್ಜಿಯನ್ನು ಅಂಗೀಕರಿಸದಿದ್ದರೂ ಸಾಗುವಳಿ ಚೀಟಿ ನೀಡಲಾಗಿದೆ. ಅರ್ಜಿಗಳಲ್ಲಿ ಮೂಲ ಅರ್ಜಿದಾರರ ಹೆಸರುಗಳನ್ನು ತಿದ್ದು ಹೊಸದಾಗಿ ಅರ್ಜಿದಾರರ ಹೆಸರುಗಳನ್ನು ಬರೆದು ಸಾಗುವಳಿ ಚೀಟಿ ನೀಡಿರುವುದು.
ಅರ್ಜಿದಾರರು ಕೋರಿದ ವಿಸ್ತೀರ್ಣಕ್ಕೆ ಹೆಚ್ಚು ಮಂಜೂರು:
ಅರ್ಜಿದಾರರು ಕೋರಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣ ಮಂಜೂರು ಮಾಡಿರುವುದು. ಭೂ ಮಾಪಕರು ತಯಾರಿಸಿರುವ ನಕ್ಷೆಯಲ್ಲಿ ನಮೂದಿಸಿರುವ ವಿಸ್ತೀರ್ಣಕ್ಕಿಂತ ಹೆಚ್ಚಿನ ವಿಸ್ತೀರ್ಣ ಮಂಜೂರು ಮಾಡಿರುವುದು. ಕೆಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಮಂಜೂರು ಮಾಡದಂತೆ ತಕರಾರುಗಳು ಬಂದಿದ್ದರೂ ಅವುಗಳನ್ನು ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಮಂಡಿಸದೆ ತಕರಾರುದಾರರಿಗೆ ಹಿಂಬರಹವನ್ನೂ ನೀಡದೆ ಮಂಜೂರು ಮಾಡಲಾಗಿದೆ. ಕುಟುಂಬದವರ ವ್ಯಾಕ್ಯಾನವನ್ನೇ ಪರಿಶೀಲಿಸದೆ ಅನೇಕ ಪ್ರಕರಣಗಳಲ್ಲಿ ಒಂದೇ ಕುಟುಂಬದವರಿಗೆ ಮಂಜೂರು ಮಾಡಲಾಗಿದೆ. ದೊಡ್ಡ ಹಿಡುವಳಿದಾರರಿಗೂ ಜಮೀನು ಮಂಜೂರಾತಿ ಮಾಡಲಾಗಿದೆ. ಮೂಲ ಅರ್ಜಿದಾರ ಪೌತಿಯಾದ ಪ್ರಕರಣಗಳಲ್ಲಿ ನಿಯಮಾನುಸಾರ ಕ್ರಮ ವಹಿಸದಿರುವುದು ಕಡುಬಂದಿದೆ.ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಸಭಾ ನಡಳಿ ವಹಿಯಲ್ಲಿ ಷರಾ ಬರೆದು ತಹಸೀಲ್ದಾರ್ ಸಹಿ ಮಾಡಿದ್ದರೂ ಸಹ ಕಿಮ್ಮತ್ತು ಪಾವತಿಸಲು ನೋಟೀಸ್ ನೀಡಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ.
ನಾಗಮಂಗಲದ ಭೂ ಅಕ್ರಮ ಪ್ರಕರಣ ಒಂದು ಸಾವಿರ ಎಕರೆವರೆಗೆ ತಲುಪಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ಅಥವಾ ಸಿಐಡಿಗೆ ಒಪ್ಪಿಸುವ ಚಿಂತನೆ ನಡೆಸಲಾಗುತ್ತಿದೆ. ಇನ್ನೂ ಯಾವುದನ್ನೂ ಅಂತಿಮವಾಗಿ ನಿರ್ಧರಿಸಿಲ್ಲ.- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ, ಮಂಡ್ಯ
ಒಂದು ಸಾವಿರ ಎಕರೆವರೆಗೆ ಸರ್ಕಾರಿ ಭೂಮಿ ಅಕ್ರಮ ಪರಭಾರೆಯಾಗಿರುವುದು ದೊಡ್ಡ ಪ್ರಕರಣ. ಇದರ ತನಿಖೆಯನ್ನು ಪೊಲೀಸರಿಂದ ನಡೆಸಲಾಗುವುದಿಲ್ಲ. ಪ್ರಕರಣವನ್ನು ಸಿಐಡಿಗೆ ವಹಿಸದೆ ಎಸ್‌ಐಟಿಗೆ ವಹಿಸುವುದೇ ಸೂಕ್ತ.- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ, ಮಂಡ್ಯ