ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲದಲ್ಲಿ ನಡೆದ ಗಲಭೆಯಿಂದ ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ 4.5 ಕೋಟಿ ರು. ನಷ್ಟವಾಗಿರುವುದಾಗಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ಗಲಭೆಯಿಂದ ಉಂಟಾದ ನಷ್ಟದ ಬಗ್ಗೆ ಜಿಲ್ಲಾಡಳಿತ ತಂಡ ರಚಿಸಿ ಮಾಹಿತಿ ಕಲೆ ಹಾಕುತ್ತಿದೆ. ಬಳಕೆಗೆ ಬಾರದ ರೀತಿಯಲ್ಲಿ ಕಟ್ಟಡಗಳು ಹಾನಿಗೊಳಗಾಗಿವೆ. ಜಿಲ್ಲಾಧಿಕಾರಿಗಳು ನಷ್ಟದ ಅಂದಾಜನ್ನು ಸರ್ಕಾರಕ್ಕೆ ಕಳುಹಿಸುತ್ತಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಹೇಳಿದರು.
ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿರುವ 24 ಪ್ರಕರಣದಲ್ಲಿ ಮೊದಲು ಸುಮೋಟೊ ಕೇಸ್, ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಗುಂಪುಗಾರಿಕೆ, ಅಂಗಡಿ-ಮುಂಗಟ್ಟಿಗೆ ಬೆಂಕಿ, ಬೈಕ್ ಗೆ ಬೆಂಕಿ, ಕಾನೂನು ಸುವ್ಯವಸ್ಥೆಗೆ ತೊಂದರೆ ಮಾಡಿರುವುದರ ಬಗ್ಗೆ ಪ್ರಕರಣ ದಾಖಲಿಸಿ 55 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.ಅಂಗಡಿ ಮುಂಗಟ್ಟು ಹಾನಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಘಟನೆ ಬಗ್ಗೆ ಸಿಸಿಟಿವಿ ವಿಡಿಯೋ ಪರಿಶೀಲಿಸಿ ಅಂತವರ ವಿರುದ್ಧವೂ ಕ್ರಮ ಜರುಗಿಸಲಾಗಿದೆ. ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿ ಭಾಗಿಯಾದವರನ್ನು ಮಾತ್ರ ಬಂಧಿಸಿದ್ದೇವೆ. ಗಲಭೆ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ನಮ್ಮ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಅವರ ವಿರುದ್ಧವೂ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದರು.
ಘಟನೆಯಿಂದ ಕೆಲವು ಗ್ರಾಮದ ಯುವಕರು ಊರು ಬಿಟ್ಟಿದ್ದಾರೆ. ಅಮಾಯಕರಿಗೆ ತೊಂದರೆ ಕೊಡಲ್ಲ. ಅವರು ಪಟ್ಟಣಕ್ಕೆ ಬರಬಹುದು. ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣಗಳ ಮೇಲೂ ಕಣ್ಣಿಡಲಾಗಿದೆ. ಬೇರೆ ಬೇರೆ ಜಿಲ್ಲೆಯಲ್ಲಿ ನಡೆದ ವಿಡಿಯೋ ಬಿಟ್ಟು ನಾಗಮಂಗಲ ಪ್ರಕರಣ ಅಂತ ಪೋಸ್ಟ್ ಹಾಕುತ್ತಿರುವುದು ಕಂಡುಬಂದಿದೆ. ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ತಂಡ ರಚನೆ ಮಾಡಲಾಗುವುದು ಎಂದು ನುಡಿದರು.ಪಿಎಫ್‌ಐ ನಂಟಿನ ಬಗ್ಗೆ ಮಾಹಿತಿ ಇಲ್ಲ: ಎಸ್‌ಪಿ
ನಾಗಮಂಗಲ ಕೋಮು ಗಲಭೆ ಪ್ರಕರಣದಲ್ಲಿ ಪಿಎಫ್‌ಐ ನಂಟಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದರು.ಪ್ರಕರಣದಲ್ಲಿ ಬಂಧಿಸಿರುವ 55 ಆರೋಪಿಗಳಲ್ಲಿ ಇಬ್ಬರು ಆರೋಪಿಗಳು ಕೇರಳ ಮೂಲದವರೆಂಬುದು ನಿಜ.
ಅವರು ನಾಗಮಂಗಲದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ 18 ವರ್ಷದಿಂದ ನಾಗಮಂಗಲದಲ್ಲೇ ವಾಸವಾಗಿದ್ದಾರೆ. ಅವರು ಇತ್ತೀಚೆಗೆ ಬಂದವರಲ್ಲ, ಅವರ ಕುಟುಂಬದವರು ಮಾತ್ರ ಕೇರಳದಲ್ಲಿದ್ದಾರೆ. ಹಾಗಾಗಿ ತನಿಖೆ ಸಮಯದಲ್ಲಿ ಗಲಭೆಗೆ ಪಿಎಫ್‌ಐ ನಂಟಿರುವ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದು, ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿ ತನಿಖೆ ನಡೆಸಲಾಗುತ್ತಿದೆ ಎಂದರು.ಪ್ರಕರಣದಲ್ಲಿ ಬಾಂಗ್ಲಾದೇಶವರು ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಘಟನೆಯಲ್ಲಿ ಅಕ್ರಮವಾಗಿ ಬಾಂಗ್ಲಾದೇಶದವರಿದ್ದರೆ ಪರಿಶೀಲನೆ ಮಾಡುತ್ತೇವೆ. ನಮಗಿರುವ ಮಾಹಿತಿ ಪ್ರಕಾರ ಪ್ರಕರಣದಲ್ಲಿ ಯಾರೂ ಇಲ್ಲ. ಅಕ್ರಮ ಚಟುವಟಿಕೆ ಇದ್ದರೆ ಗೊತ್ತಾಗುತ್ತಿತ್ತು ಎಂದರು.