ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಆಟೋ ಚಾಲಕರು ಮತ್ತು ರಸ್ತೆ ಬದಿಯ ವ್ಯಾಪಾರಿಗಳು ಶ್ರೀರಾಮನವಮಿ ಅಂಗವಾಗಿ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಮೊಸರನ್ನ, ಬಾತ್, ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.
ಈ ಬಾರಿ ಉತ್ತಮ ಮಳೆಯಾಗಿ ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗಲಿ, ದೇಶಕ್ಕೆ ಅನ್ನ ನೀಡುವ ರೈತರು ಸಮೃದ್ಧವಾಗಿ ಬೆಳೆ ಬೆಳೆದು, ಜನರು ಆರೋಗ್ಯವಂತ ಜೀವನ ನಡೆಸುವಂತಾಗಲೆಂದು ರಾಮಭಕ್ತರು ಪ್ರಾರ್ಥಿಸಿದರು.ಪಟ್ಟಣದ ಮಂಡ್ಯ ವೃತ್ತದ ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಪಡುವಲಪಟ್ಟಣ ರಸ್ತೆ ಬೆಟ್ಟದ ಆಂಜನೇಯಸ್ವಾಮಿ ದೇಗುಲ, ಹುಲ್ಲೆಸಳೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಇತಿಹಾಸ ಪ್ರಸಿದ್ಧ ಕಂಬದಹಳ್ಳಿ ಶ್ರೀ ಆಂಜನೇಯಸ್ವಾಮಿ, ಹದ್ದಿನಕಲ್ಲು ಶ್ರೀ ಹನುಮಂತರಾಯಸ್ವಾಮಿ, ದೇವಲಾಪುರದ ಶ್ರೀ ರಾಮಮಂದಿರ, ಶ್ರೀ ಆಂಜನೇಯಸ್ವಾಮಿ, ಸಖಧರೆ ಶ್ರೀ ಆಂಜನೇಯಸ್ವಾಮಿ ಸೇರಿದಂತೆ ಎಲ್ಲಾ ಶ್ರೀರಾಮಾಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಹಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಶ್ರೀರಾಮನ ಉತ್ಸವ, ಮೆರವಣಿಗೆ ಕಾರ್ಯಕ್ರಮಗಳು ಜರುಗಿದವು.