-ಕನ್ನಡಪ್ರಭ ವಾರ್ತೆ ಮೈಸೂರುಹನಿ ನೀರಾವರಿ ಅಳವಡಿಸಿಕೊಳ್ಳುವುದರ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಕೆ. ನಾಗರಾಜ್ ಕರೆ ನೀಡಿದರು.ಮೈಸೂರು ತಾಲೂಕು ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಆಯೋಜಿಸಿದ್ದ ಕಬ್ಬು ಬೆಳೆಯಲ್ಲಿ ಸೂಕ್ಷ್ಮ ನೀರಾವರಿ, ರಸಾವರಿ ತಾಂತ್ರಿಕತೆಗಳು ಮತ್ತು ಆಧುನಿಕ ಬೇಸಾಯ ಪದ್ಧತಿಗಳ ಅಳವಡಿಕೆ ಮೂಲಕ ಅಧಿಕ ಲಾಭ ಕುರಿತ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೂ ಮಳೆ ನೀರಿನ ಸದ್ಬಳಕೆಯನ್ನು ಹನಿ/ ತುಂತುರು ನೀರಾವರಿ ಮುಖಾಂತರ ಮಾಡಬಹುದಾಗಿದೆ. ನೀರಿನ ಮಿತ ಬಳಕೆ, ನೀರಿನ ಸದ್ಬಳಕೆ ಮಾಡಬೇಕು. ಫಲವತ್ತಾದ ಮಣ್ಣು ಮತ್ತು ನೀರನ್ನು ನಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಮಂಡ್ಯ ವಲಯ ಕೃಷಿ ಸಂಶೋಧನಾ ಕೇಂದ್ರ ಜಾಗರಿ ಪಾರ್ಕ್ ಪ್ರಾಧ್ಯಾಪಕ ಡಾ. ಕೇಶವಯ್ಯ ಅವರು, ಕಬ್ಬು ಬೆಳೆಯಲ್ಲಿ ಬಿತ್ತನೆ ಸಮಯ, ತಳಿ ಆಯ್ಕೆ, ಬಿತ್ತನೆ ತಯಾರಿ, ಬೀಜೋಪಚಾರ, ಮಡಿತಯಾರಿಕೆ, ಮಲ್ಚಿಂಗ್, ಅಂತರಬೆಳೆ ಪದ್ಧತಿಗಳು ಹಾಗೂ ಕಬ್ಬಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳು, ಕಳೆ ನಿರ್ವಹಣೆ ಕುರಿತು ವೈಜ್ಞಾನಿಕ ಮಾಹಿತಿ ನೀಡಿದರು.ಕಬ್ಬು ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿಗಳ ಅಳವಡಿಕೆ, ನಿರ್ವಹಣೆ, ರಸಾವರಿ ಪದ್ಧತಿ, ಎಚ್ಚರಿಕೆ ಕ್ರಮಗಳು, ಸಮಸ್ಯೆ ಹಾಗೂ ಪರಿಹಾರಗಳ ಕುರಿತು ನೆಟಾಫೆಮ್ ಇರಿಗೇಶನ್ ಇಂಡಿಯಾ ಪ್ರೈ.ಲಿ. ಬೇಸಾಯ ತಜ್ಞ ಡಾ. ಅಂಜನಪ್ಪ ತಿಳಿಸಿದರು.ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯದ ಡಾ.ಆರ್. ಸುಮಾ ಅವರು, ಕಬ್ಬು ಬೆಳೆಯಲ್ಲಿ ಮಣ್ಣು, ಪೋಷಕಾಂಶಗಳ ಮಹತ್ವ, ಕೊರತೆಯ ಲಕ್ಷಣಗಳು, ರಸಗೊಬ್ಬರಗಳ ನಿರ್ವಹಣೆ, ರಸಾವರಿಗೆ ರಸಗೊಬ್ಬರಗಳ ಕೋಷ್ಟಕ, ಲಘು ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು.ತರಬೇತಿಯ ಎರಡನೇ ದಿನದ ಡಾ.ಆರ್.ಎನ್. ಪುಷ್ಪಾ ಅವರು, ಕಬ್ಬು ಬೆಳೆಯಲ್ಲಿ ಬರುವ ರೋಗಗಳ ಗುರುತಿಸುವಿಕೆ ಮತ್ತು ಸಮಗ್ರ ನಿಯಂತ್ರಣಾ ಕ್ರಮಗಳು ಹಾಗೂ ಕಬ್ಬು ಬೆಳೆಯಲ್ಲಿ ಬರುವ ವಿವಿಧ ಕೀಟಗಳ ಗುರುತಿಸುವಿಕೆ ಮತ್ತು ಸಮಗ್ರ ನಿಯಂತ್ರಣಾ ಕ್ರಮಗಳು ಕುರಿತು ಉಪನ್ಯಾಸ ನೀಡಿದರು. ನಂತರ ಡಾ.ಜಿ.ವಿ. ಸುಮಂತ್ ಕುಮಾರ್ ಅವರು, ಕೃಷಿಯಲ್ಲಿ ಎರೆಹುಳು ಗೊಬ್ಬರದ ಮಹತ್ವ ಕುರಿತು ಉಪನ್ಯಾಸ ನೀಡಿದರು.ಮೂರನೇ ದಿನದ ಕ್ಷೇತ್ರ ಭೇಟಿಯಲ್ಲಿ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ತೋಟಗಾರಿಕೆ ಬೆಳೆಗಳ ನಿಖರ ಬೇಸಾಯ ತರಬೇತಿ ಉತ್ಕೃಷ್ಟ ಕೇಂದ್ರದಲ್ಲಿ ತುಂತುರು ಘಟಕ ಹಾಗೂ ಸೂಕ್ಷ್ಮ ನೀರಾವರಿ ಪಜ್ಧತಿಯಲ್ಲಿ ಸ್ವಯಂ ಚಾಲಿತ ನೀರಾವರಿ ಮತ್ತು ರಸಾವರಿ ವಿಧಾನಗಳ ವೀಕ್ಷಣೆ ಕುರಿತು ಉಪ ತೋಟಗಾರಿಕೆ ನಿರ್ದೇಶಕ ಡಾ. ವೆಂಕಟೇಶ ಮಾಹಿತಿ ನೀಡಿದರು.ನಂತರ ಕೊಪ್ಪ ಗ್ರಾಮದ ಪ್ರಗತಿಪರ ರೈತ ರಘು ಅವರ ಜಮೀನಿಗೆ ಭೇಟಿ ನೀಡಿ, ಕಬ್ಬು ಬೆಳೆಯಲ್ಲಿ ಹನಿ ನೀರಾವರಿ ಘಟಕಗಳ ಅಳವಡಿಕೆಯನ್ನು ಪ್ರಾಯೋಗಿಕವಾಗಿ ವೀಕ್ಷಿಸಿ ಮಾಹಿತಿ ಪಡೆಯಲಾಯಿತು.ಸಮಾರೋಪ ಸಮಾರಂಭದಲ್ಲಿ ರೈತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತರಬೇತಿ ಸಂಯೋಜಕಿ ಎಂ.ಬಿ. ಮಂಜುಳಾ ಇದ್ದರು.-----------------eom/mys/shekar/