ಹಾವೇರಿ: ಅಜ್ಞಾನ ಮತ್ತು ಅಂಧಕಾರವನ್ನು ನಿವಾರಿಸುವ ಶಕ್ತಿ ಜ್ಞಾನಕ್ಕಿದೆ. ನುಡಿಗಳಲ್ಲಿ ಜ್ಞಾನ ಪ್ರಕಾಶವಿದ್ದರೆ ಅಜ್ಞಾನ, ಅಂಧಕಾರಗಳು ಪಲಾಯನ ಮಾಡುತ್ತವೆ. ಹಬ್ಬಗಳು ಸಮಾಜದಲ್ಲಿ ಆದರ್ಶವಾಗಬೇಕು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕರ್ಜಗಿಯ ಎಸ್‌ಜೆಎಂ ವಿದ್ಯಾಪೀಠದ ಶಿಶುವಿಹಾರ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಬಸವಕೇಂದ್ರ ಹೊಸಮಠ ವತಿಯಿಂದ ನಾಗ ಪಂಚಮಿ ನಿಮಿತ್ತ ಮಕ್ಕಳಿಗೆ ಹಾಲನ್ನು ವಿತರಿಸಿ ಮಾತನಾಡಿದರು. ಕಲ್ಲನಾಗರ ಕಂಡರೆ ಹಾಲನ್ನೆರಿವವರು. ದಿಟ್ಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ ಇಲ್ಲದ ದೇವರಿಗೆ ಸಲ್ಲದ ಸೇವೆ ಯಾಕೆ? ಮನೆಗೆ ಬಂದ ಅತಿಥಿ, ಅಭ್ಯಾಗತರು, ಬಂಧುಗಳನ್ನು ದೇವರೆಂದು ಭಾವಿಸು ಎಂದರು.ಭಾರತದಲ್ಲಿ ವಿವಿಧ ಧರ್ಮಗಳ ಹಬ್ಬಗಳು ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುತ್ತವೆ. ಪಂಚಮಿ ಎಂದರೆ ಐದು ತತ್ವಗಳನ್ನು ಒಳಗೊಂಡಿದೆ. ಸೃಷ್ಟಿ, ಮನುಷ್ಯನ ದೇಹ ಪಂಚಭೂತಗಳಿಂದ ಕೂಡಿದೆ. ಹಾಲು ಕೂಡ ಒಂದು ಮನುಷ್ಯನಿಗೆ ಆಹಾರ. 12ನೇ ಶತಮಾನದಲ್ಲಿ ಬಸವಾದಿ ಶರಣರು ಮೂಢನಂಬಿಕೆ, ಕಂದಾಚಾರಿಗಳಿಗೆ ತಿಲಾಂಜಲಿ ನೀಡಿ ವೈಚಾರಿಕತೆಯ ತಳಹದಿಯ ಮೇಲೆ ಸಾಮಾಜಿಕ ಸಮಾನತೆ ಸ್ಥಾಪಿಸಿದರು. ಮುಗ್ಧ ಜನರನ್ನು ದೇವರು ಹೆಸರಿನಲ್ಲಿ ನಡೆಯುವ ಶೋಷಣೆ ವಿರುದ್ಧ ತಮ್ಮ ವಚನ ಚಳವಳಿಯನ್ನು ಆರಂಭಿಸಿದರು ಎಂದರು.ಕಳೆದ 35 ವರ್ಷಗಳಿಂದ ಬಸವಕೇಂದ್ರ ಹೊಸಮಠ ವತಿಯಿಂದ ನಾಗ ಪಂಚಮಿ ಆಚರಣೆ ಬದಲು ಬಸವ ಪಂಚಮಿಯನ್ನಾಗಿ ಬಡ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಹಬ್ಬಗಳಿಗೆ ವೈಚಾರಿಕತೆ ತುಂಬಲಾಗುತ್ತಿದೆ ಎಂದರು. ಈ ವೇಳೆ ಸತೀಶ ಹರಿವಿಮಠ, ಮಂಜುನಾಥ, ಚೇತನ, ಶಿಶುವಿಹಾರದ ಶಿಕ್ಷಕಿಯರು ಸಿಬ್ಬಂದಿ, ಮಹಿಳೆಯರು, ಮಕ್ಕಳು ಇದ್ದರು. ಹೊರಗುತ್ತಿಗೆ ನೌಕರರ ವೇತನಕ್ಕೆ ಕತ್ತರಿ: ಆರೋಪ
ಬ್ಯಾಡಗಿ: ಜಿಲ್ಲೆಯ ವಿವಿಧೆಡೆ ಬಹುತೇಕ ಇಲಾಖೆಗಳಲ್ಲಿ ಶಾಸಕರು ಸಚಿವರ ಹೆಸರನ್ನು ಹೇಳಿಕೊಂಡು ಹೊರಗುತ್ತಿಗೆ ನೌಕರರಿಗೆ ನೀಡುತ್ತಿರುವ ಸಂಭಾವನೆ ಹಣವನ್ನೇ ಕಿತ್ತುಕೊಳ್ಳಲಾಗುತ್ತಿದೆ. ಕೂಡಲೇ ಇಂತಹ ಕ್ರಮಗಳಿಗೆ ಕೈಹಾಕುವುದನ್ನು ನಿಲ್ಲಿಸದಿದ್ದರೆ ತೀವ್ರ ಸ್ವರೂಪದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಗುರುರಾಜ ಕಂಬಳಿ ಎಚ್ಚರಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕಾಯಂ ನೌಕರರಗಿಂತ ಹೆಚ್ಚು ಅವಧಿ ಕೆಲಸ ನಿರ್ವಹಿಸುವ ಮೂಲಕ ಸರ್ಕಾರದ ಮೇಲಿನ ಹೊರೆಯನ್ನು ಗುತ್ತಿಗೆ ನೌಕರರು ಇಳಿಸಿದ್ದೇವೆ. ಆದರೆ ಇದಕ್ಕೆ ಮಾನ್ಯತೆ ನೀಡದಿರುವ ಹಿರಿಯ ಅಧಿಕಾರಿಗಳು ನಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರಲ್ಲದೇ ಇತ್ತೀಚೆಗೆ ಶಾಸಕರು, ಸಚಿವರ ಹೆಸರನ್ನು ಹೇಳಿಕೊಂಡು ನಮ್ಮಿಂದ ಹಣ ವಸೂಲಿಗಿಳಿದಿದ್ದಾರೆ ಎಂದು ಆರೋಪಿಸಿದರು.ಗುತ್ತಿಗೆ ನೌಕರರ ಜೇಬಿಗೆ ಕತ್ತರಿ:ನಿಯಮದಂತೆ ಮೊದಲು ನಮ್ಮ ಖಾತೆಗಳಿಗೆ 14200 ರು.ಗಳನ್ನು ಪ್ರತಿ ತಿಂಗಳು ಹಣ ಹಾಕಲಾಗುತ್ತದೆ, ಬಳಿಕ ಬ್ಯಾಂಕನಿಂದ ಹಣ ಬಿಡಿಸಿಕೊಂಡು 4ರಿಂದ 6 ಸಾವಿರ ರು.ವರೆಗೆ ಮರಳಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಇದಕ್ಕೆ ತಪ್ಪಿದಲ್ಲಿ ಕೆಲಸದಿಂದ ವಜಾಗೊಳಿಸುವ ಬೆದರಿಕೆ ನೀಡಲಾಗುತ್ತಿದ್ದು, ಅಭದ್ರತೆಯಲ್ಲಿ ಬದುಕನ್ನು ಸಾಗಿಸಲಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಸೌಭಾಗ್ಯ ಮಣೆಗಾರ, ಜಿ.ಎಂ. ಗುರಪ್ಪನವರ, ದುರ್ಗೇಶ ವಂದವಾಗಲು, ವೀರೇಶ ಹೀರೇಮಠ, ವೀರಭದ್ರಗೌಡ ಯಡಚಿ, ಹಾಲಸ್ವಾಮಿ ಮಠದ, ಕಾವ್ಯ ಬಗಾಡೆ, ಮಹೇಶ ಕಳಸದ, ಚಂಪಾ ನೆಲೋಗಲ್, ನವೀನ, ಮಲ್ಲಿಕಾರ್ಜುನ ರಾಮಣ್ಣನವರ, ಚೇತನ್ ಕಳ್ಳಮನಿ, ಸುರೇಶ ಸಾಗರ, ಸಂತೋಷ ಸಂಗೂರು, ಇಂತಿಯಾಜ್ ಮದ್ದರಕಿ, ರಾಜು ಪೂಜಾರ, ಶಿವಕುಮಾರ, ಅಶೋಕ ದೇವಗಿರಿ, ಕುಮಾರಿ ಅಶ್ವಿನಿ, ಮಲ್ಲಿಕಾರ್ಜುನ ಮಾದಿಹಳ್ಳಿ ಹಾಗೂ ಇತರರಿದ್ದರು.