ಮುಂಡಗೋಡ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಆಗಮಿಸುತ್ತಿದ್ದಂತೆ ಎಲ್ಲೆಂದರಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.
ಯುಗಾದಿಯ ಬಳಿಕ ಸುದೀರ್ಘ ಕಾಲದ ನಂತರ ಶ್ರಾವಣ ಮಾಸದೊಂದಿಗೆ ಪಂಚಮಿ ಬರುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರುಗು ಬರಲು ಕಾರಣವಾಗಿದೆ. ಶ್ರಾವಣ ಮಾಸದಲ್ಲಿ ಬಹುತೇಕರು ಧಾರ್ಮಿಕ ಪೂಜೆ ಪುನಸ್ಕಾರದಲ್ಲಿ ತೊಡಗುತ್ತಾರೆ. ಈ ನಡುವೆ ಬರುವ ನಾಗರ ಪಂಚಮಿ ಹಬ್ಬವನ್ನು ಕೂಡ ಅಷ್ಟೇ ಮಾನ್ಯತೆಯ ಮೇರೆಗೆ ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದೇ ರೀತಿ ಈಗ ಎಲ್ಲೆಂದರಲ್ಲಿ ಪಂಚಮಿ ಹಬ್ಬದ ಸಡಗರ ಸಂಭ್ರಮ ಕಾಣುತ್ತಿದೆ.ಹಬ್ಬದ ಪ್ರಯುಕ್ತ ಪುಟಾಣಿ, ಶೇಂಗಾ, ರವೆ, ಎಳ್ಳು ಸೇರಿದಂತೆ ವಿವಿಧ ಧಾನ್ಯಗಳ ಉಂಡಿ (ಲಾಡು) ಹಾಗೂ ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಂತೂ ಈ ಹಬ್ಬದ ಗಮ್ಮತ್ತೇ ಬೇರೆ. ನಾಗದೇವತಾ ಮೂರ್ತಿಗಳಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು. ನಾಗದೋಷ ಮುಕ್ತಿಗಾಗಿ ನಾಗರ ಕಲ್ಲುಗಳಿಗೆ ಹಾಲುಣಿಸಿದರು. ಕೆಲವರು ಮಣ್ಣಿನ ನಾಗರಕ್ಕೆ ಹಾಲೆರೆದರೆ, ಇನ್ನು ಕೆಲವರು ಚಿನ್ನ ಹಾಗೂ ಬೆಳ್ಳಿ ನಾಗರ ಮೂರ್ತಿಗಳಿಗೆ ಹಾಲೆರೆದು ಪೂಜೆ ಸಮರ್ಪಿಸಿದರು.
ಜನರು ಈಗ ಬೆಳ್ಳಿ ಬಂಗಾರ ನಾಗರ ಮೂರ್ತಿ ಖರೀದಿಯಲ್ಲಿ ತೊಡಗಿದ್ದು, ಬಹುತೇಕ ಚಿನ್ನ ಬೆಳ್ಳಿ ಅಂಗಡಿಗಳಲ್ಲಿ ಬೆಳ್ಳಿ ನಾಗರ ಮೂರ್ತಿಗಳಿಗೆ ತೀವ್ರ ಬೇಡಿಕೆ ಬಂದಿದೆ.ಮಳೆಯ ನಡುವೆ ನಿಂಬೆ ಹಣ್ಣಿನ ಆಟದ ಸಡಗರ:
ನಾಗರ ಪಂಚಮಿ ಬರುತ್ತಿದ್ದಂತೆ ನಿಂಬೆ ಹಣ್ಣಿನ ಆಟದ ಭರಾಟೆ ಕೂಡ ಜೋರಾಗಿದೆ. ತಾಲೂಕಿನಾದ್ಯಂತ ನಿಂಬೆ ಹಣ್ಣು ಎಸೆಯುವ ಆಟ ಪ್ರಾರಂಭವಾಗಿದೆ. ಗ್ರಾಮೀಣ ಭಾಗದಲ್ಲಿ ಈ ಆಟ ಅತಿ ಪ್ರಾಮುಖ್ಯತೆ ಪಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ನಾಗರಪಂಚಮಿ ವೇಳೆ ಸುಮಾರು ಒಂದು ವಾರದವರೆಗೆ ಈ ಆಟದ್ದೇ ಪಾರುಪಥ್ಯ. ನಿಂಬೆಹಣ್ಣನ್ನು ಸುಮಾರು ದೂರವಿರುವ ಕಂಬ ಅಥವಾ ಗಡಿ ದಾಟಿಸುವ ಬಾಜಿ ಕಟ್ಟುತ್ತಿದ್ದರು. ಬಾಜಿಯಲ್ಲಿ ನಿಂಬೆ ಹಣ್ಣು ಹೊಡೆಯುವರು ಒಬ್ಬರಾದರೆ ಬಾಜಿ ಕಟ್ಟುವವರು ಹತ್ತಾರು ಜನ. ಆಟ ಆಡುವವರೊಂದಿಗೆ ನೋಡುವವರ ಸಂಖ್ಯೆಗೇನು ಕಡಿಮೆ ಇರಲಿಲ್ಲ. ನೋಡುವವರಿಗೂ ಈ ಆಟ ಅಷ್ಟೇ ಮದ ನೀಡುತ್ತಿತ್ತು. ಪಂಚಮಿ ಹಬ್ಬದ ಪ್ರಯುಕ್ತ ಈ ಆಟಗಳಿಗೆ ಜೀವ ಬಂದಿದೆ. ಹಬ್ಬ ಮುಗಿಯುವವರೆಗೂ ಇಲ್ಲಿಯ ನಿಂಬೆ ಹಣ್ಣಿನ ಆಟದ ಪ್ರಿಯರಿಗೆ ಈ ಆಟದ ಜ್ವರ ಸಾಮಾನ್ಯವಾಗಿರುತ್ತದೆ.ನಶಿಸಿದ ಜೋಕಾಲಿ ಆಟ:
ಈ ಹಿಂದೆ ವಿವಿಧ ಬಡಾವಣೆಯ ಗಿಡ ಹಾಗೂ ಮನೆಗಳ ಮಾಳಿಗೆ ಸೇರಿದಂತೆ ಎಲ್ಲೆಂದರಲ್ಲಿ ಜೋಕಾಲಿ ಕಟ್ಟಿ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು, ಪುರುಷರು ಎನ್ನದೇ ಯಾವುದೇ ಭೇದ-ಭಾವವಿಲ್ಲದೇ ಜೋಕಾಲಿ ಜೀಕುವ ದೃಶ್ಯಗಳು ಕಾಣ ಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಗೆ ಅದು ನಶಿಸುತ್ತಾ ಹೋಗಿದೆ. ಕೆಲವೇ ಕೆಲವೆಡೆ ಮಾತ್ರ ಜೋಕಾಲಿಗಳು ಕಾಣ ಸಿಗುತ್ತಿರುವುದು ವಿಪರ್ಯಾಸವೇ ಸರಿ.