ಬೇಲೂರು: ಬಡ ಮಕ್ಕಳು, ಅನಾಥರು ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಹಾಲು ಹಂಚುವ ಮೂಲಕ ಬಸವ ಬಂಧುತ್ವ ವೇದಿಕೆಯ ತಂಡ ಅರ್ಥಪೂರ್ಣವಾಗಿ ನಾಗರ ಪಂಚಮಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಗೌರವ ಕಾರ್ಯದರ್ಶಿ ಬಿ.ಬಿ. ಶಿವರಾಜು ಹೇಳಿದರು.
ಪಟ್ಟಣದ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಸವ ಪಂಚಮಿ ಅಂಗವಾಗಿ ಸಂವಿಧಾನದ ಪೀಠಿಕೆ ಓದು ಕಾರ್ಯಕ್ರಮ ಉದ್ಘಾಟನೆ ನಡೆಸಿ ಮಾತನಾಡಿ, ಪ್ರತಿಯೊಬ್ಬರೂ ಕೆಲವು ಮೂಢನಂಬಿಕೆಯಿಂದ ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಬಸವ ಬಂಧು ವೇದಿಕೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ. ಅಮೂಲ್ಯ ಪೌಷ್ಟಿಕ ಆಹಾರವಾಗಿರುವ ಹಾಲನ್ನು ಚೆಲ್ಲಿ ವ್ಯರ್ಥ ಮಾಡುವುದು ನಾಗರಿಕರ ಲಕ್ಷಣವಲ್ಲ. ಮನುಷ್ಯ ತನ್ನ ಬುದ್ಧಿವಂತಿಕೆˌ ವಿವೇಚನಾ ಶಕ್ತಿಯನ್ನು ಉಪಯೋಗಿಸಬೇಕು. ಸಂಪ್ರದಾಯವಾದಿಗಳು ಬಿತ್ತಿದ ಮೌಢ್ಯಗಳಿಂದ ಹೊರಬರಬೇಕು. ಕಲ್ಲಿನ ನಾಗರಕ್ಕೆ ಹಾಲೆರೆದು ವ್ಯರ್ಥ ಮಾಡುವ ಬದಲಿಗೆ ಅದೇ ಹಾಲನ್ನು ಅನಾಥಾಶ್ರಮ, ಹಾಸ್ಟೆಲ್‌ಗೆ ವಿತರಿಸುವ ಮೂಲಕ ಪಂಚಮಿ ಹಬ್ಬವನ್ನು ವೈಚಾರಿಕ ಪ್ರಾವಾದಿ ಬಸವಣ್ಣನವರ ಚಿಂತನೆಗಳಿಗೆ ಗೌರವ ಸಮರ್ಪಿಸಿ ಬಸವ ಪಂಚಮಿ ಹಬ್ಬವಾಗಿ ಆಚರಿಸಿ ಪ್ರತಿವರ್ಷ ಮಾನವ ಬಂಧುತ್ವ ವೇದಿಕೆಯು ಪ್ರಶಂಸಾರ್ಹ ಕಾರ್ಯ ಮಾಡುತ್ತಿದೆ ಎಂದರು.ಬಿಜಿವಿಎಸ್ ಅದ್ಯಕ್ಷ ಹಾಗು ವಕೀಲ ಎಚ್ ಆರ್ ಚಂದ್ರು ಮಾತನಾಡಿ, ಹಬ್ಬಗಳನ್ನು ಕೇವಲ ವೈದಿಕ ಆಚರಣೆಗಳಾಗಿ ನೋಡದೆ, ಸಾಮಾಜಿಕ ಜವಾಬ್ದಾರಿಯೊಂದಿಗೆ ಸೇವಾ ರೂಪದಲ್ಲಿ ಆಚರಿಸಬೇಕಾಗಿದೆ. ಇಂತಹ ಕಾರ್ಯಗಳು ಮನುಷ್ಯತ್ವದ ಮೂಲ ಧರ್ಮವನ್ನು ನೆನೆಸಿಸುತ್ತವೆ ಎಂದು ತಿಳಿಸಿದರು. ಮಾನವ ಭಂದತ್ವ ವೇದಿಕೆಯ ಮೈಸೂರು ವಿಭಾಗೀಯ ಸಂಚಾಲಕ ಸತೀಶ್ ಮಾತನಾಡಿ ಮಾನವ ಬಂಧುತ್ವ ವೇಧಿಕೆಯಿಂದ ಯುವ ಜನಾಂಗದಲ್ಲಿ ಪರಿಪೂರ್ಣ ಸಂಸ್ಕೃತಿಯೊಂದಿಗೆ ಬಸವ ಪಂಚಮಿ ಆಚರಣೆ ಮಾಡುವ ಮೂಲಕ ಯುವಮನಸ್ಸುಗಳಿಗೆ ಸಾಮಾಜಿಕ ಜವಬ್ದಾರಿ ಹಾಗು ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ನೀಡುವ ಸಲುವಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು. ಅಂತೋಣಿ ಸ್ವಾಮಿ ವಿದ್ಯಾರ್ಥಿಗಳಿಗೆ ಮೌಡ್ಯ ಹಾಗು ಕಂದಾಚಾರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸೌಭಾಗ್ಯ ಅಂತೋಣಿ, ಪ್ರಾಂಶುಪಾಲ ಚಂದ್ರಶೇಖರ್, ಪತ್ರಕರ್ತ ಲಕ್ಷ್ಮಣ್, ಶೇಷಪ್ಪ, ಲಿಖಿತ್ ರಂಜಿತ್, ರಂಗಸ್ವಾಮಿ, ನಿಂಗರಾಜು ಇತರರು ಇದ್ದರು.