ನಾಗರಹಳ್ಳಿ ಜನರಿಗೆ ಬಸ್‌ಗಾಗಿ ಹೆದ್ದಾರಿ ಬದಿಯಲ್ಲೇ ಕಾಯುವ ದುಃಸ್ಥಿತಿ

KannadaprabhaNewsNetwork | Published : Dec 28, 2024 12:46 AM

ಸಾರಾಂಶ

ತಾಲೂಕಿನಲ್ಲಿ ದೊಡ್ಡ ಊರು ಎನಿಸಿಕೊಂಡಿರುವ ನಾಗರಹಳ್ಳಿ ಗ್ರಾಮದಲ್ಲಿ ಸಮರ್ಪಕ ಬಸ್ ನಿಲ್ದಾಣಕ್ಕೂ ಜನ ಪರದಾಡುವಂತಾಗಿದೆ. ನಿತ್ಯ ನೂರಾರು ಪ್ರಯಾಣಿಕರು ರಸ್ತೆ ಬದಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ತಲುಪಿದೆ.

8 ಗ್ರಾಮ, 9 ನಗರ, ಎರಡು ರಾಜ್ಯಗಳಿಗೆ ಸಂಪರ್ಕ ಹೊಂದಿರುವ ಗ್ರಾಮ

ಕನ್ನಡಪ್ರಭ ವಾರ್ತೆ ಯಡ್ರಾಮಿ

ತಾಲೂಕಿನಲ್ಲಿ ದೊಡ್ಡ ಊರು ಎನಿಸಿಕೊಂಡಿರುವ ನಾಗರಹಳ್ಳಿ ಗ್ರಾಮದಲ್ಲಿ ಸಮರ್ಪಕ ಬಸ್ ನಿಲ್ದಾಣಕ್ಕೂ ಜನ ಪರದಾಡುವಂತಾಗಿದೆ. ನಿತ್ಯ ನೂರಾರು ಪ್ರಯಾಣಿಕರು ರಸ್ತೆ ಬದಿ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ತಲುಪಿದೆ.ನಾಗರಹಳ್ಳಿ ಕೇಂದ್ರವನ್ನಾಗಿರಿಸಿ ಕೊಂಡರೆ ಸುಮಾರು 8 ಗ್ರಾಮಗಳು, 9 ಪ್ರಮುಖ ನಗರಗಳು ಹಾಗೂ ಎರಡು ರಾಜ್ಯಗಳಿಗೆ ಸಂಪರ್ಕ ಹೊಂದಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ಆದರೆ ಸುಸಜ್ಜಿತ ಬಸ್ ನಿಲ್ದಾಣವೂ ಇಲ್ಲಿಲ್ಲ. ಗ್ರಾಮದ ಮೂಲಕ ಸಿಂದಗಿ-ಶಾಹಪುರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ದೂರದ ಊರಿಗೆ ತೆರಳುವವರು ಹೆದ್ದಾರಿ ಬದಿಯಲ್ಲೇ ನಿಲ್ಲಬೇಕಾಗಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ.ನಾಗರಹಳ್ಳಿ ಗ್ರಾಮದಿಂದ ಬೇರೆ ಕಡೆ ತೆರಳುವವರು ಬಸ್ ನಿಲ್ದಾಣವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಕಲಬುರಗಿ, ರಾಯಚೂರ, ಯಾದಗಿರಿ, ವಿಜಯಪುರ, ಬಾಗಲಕೋಟ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಬಾಂಬೆ, ಸೋಲಾಪುರ, ಮಿರಜ, ಪುಣೆ, ಹೈದರಾಬಾದ ಮೊದಲಾದ ನಗರಗಳಿಗೆ ತೆರಳುವ ಸಾವಿರಾರು ಮಂದಿ ತಂಗುದಾಣವಿಲ್ಲದೆ ಪರದಾಡುತ್ತಿದ್ದಾರೆ.ಮಳೆಗಾಲದ ದುಸ್ಥಿತಿ

ಇನ್ನು ಮಳೆಗಾಲದಲ್ಲಿ ಜನರ ಪಾಡು ಹೇಳತೀರದು. ಮಳೆಯಲ್ಲಿ ರಸ್ತೆ ಬದಿ ಬಸ್‌ಗಾಗಿ ಕಾಯುವ ದುಸ್ಥಿತಿ ಉಂಟಾಗಿದೆ. ಅದೇ ರೀತಿ ನಾಗರಹಳ್ಳಿ ಗ್ರಾಮದಲ್ಲಿ ಪ್ರತಿ ಪ್ರತಿದಿನ ಸಂತೆ ನಡೆಯುತ್ತದೆ. 8 ಗ್ರಾಮಗಳಿಂದ ಜನರು, ವ್ಯಾಪಾರಸ್ಥರು ಸಂತೆಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಬಸ್ ನಿಲ್ದಾಣ ಅವಶ್ಯಕವಾಗಿದೆ.

ಹಳೆ ಬಸ್ ನಿಲ್ದಾಣ ಶಿಥಿಲ

ನಾಗರಹಳ್ಳಿ ಗ್ರಾಮದಲ್ಲಿ ರಾಷ್ಟ್ರ ಹೆದ್ದಾರಿ ನಿರ್ಮಾಣಕ್ಕೆ ಮುನ್ನ ಚಿಕ್ಕದಾದ ಬಸ್ ತಂಗುದಾಣ ಇತ್ತು. ಹಲವು ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಈಗ ಬಸ್ ನಿಲ್ದಾಣ ಸಂಪೂರ್ಣವಾಗಿ ಶಿಥಿಲಗೊಂಡಿದೆ. ರಾತ್ರಿಯಾಗುತ್ತಿದ್ದಂತೆ ಮದ್ಯಪಾನ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗುತ್ತದೆ. ಶಿಥಿಲ ಬಸ್ ನಿಲ್ದಾಣವನ್ನು ತೆರವುಗೊಳಿಸಿ ಹೊಸ ನಿಲ್ದಾಣ ನಿರ್ಮಾಣ ಮಾಡಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

Share this article