ಕನ್ನಡಪ್ರಭ ವಾರ್ತೆ ಮಡಿಕೇರಿತಿತಿಮತಿಯ ಅರಣ್ಯ ಇಲಾಖೆಯ ವಸತಿಗೃಹದ ಆವರಣದಲ್ಲಿ ಅರಣ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಇತ್ತೀಚೆಗೆ ನಡೆಯಿತು.
ಇತ್ತೀಚೆಗೆ ಮತ್ತಿಗೋಡಿನಲ್ಲಿ ಆನೆ ಶಿಬಿರ ವೀಕ್ಷಿಸುವ ಸ್ಥಳವನ್ನು ನಿಗದಿ ಮಾಡಿದ್ದು, ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಕೊಡಗಿನಲ್ಲಿ ದುಬಾರೆ ಹಾಗೂ ನಾಗರಹೊಳೆಯಲ್ಲಿ ಆನೆ ಶಿಬಿರವಿದ್ದು, ಪುನಃ ಈಗ ತಿತಿಮತಿಯ ಮತ್ತಿಗೋಡಿನಲ್ಲಿ ಪ್ರಾರಂಭಿಸಿದ್ದು, ಹಲವು ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ರೈತ ಸಂಘದ ಪ್ರಮುಖರು ಆರೋಪಿಸಿದರು.ಕೋಟಿಗಟ್ಟಲೆ ಹಣವನ್ನು ಹೂಡಿಕೆ ಮಾಡಿದ ಇದೇ ಸ್ಥಳದಲ್ಲಿ ಒಂದು ಸಾಕಾನೆ ಹಾಗೂ ಕಾಡುಕೋಣ ಸಾವಿಗೀಡಾಯಿತು. ಇದರಿಂದಲೇ 23 ರಸ್ತೆ ಹುಬ್ಬುಗಳನ್ನು ನಿರ್ಮಿಸಲಾಯಿತು. ಇದರಿಂದ ಆಸ್ಪತ್ರೆಗೆ ಸಾಗಿಸುವ ರೋಗಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಆನೆ ಶಿಬಿರ ವೀಕ್ಷಿಸುವ ಸ್ಥಳವನ್ನು ನಿರ್ಮಿಸುವುದರಿಂದ ವಾಹನದಟ್ಟಣೆ ಹೆಚ್ಚಾಗುವುದಿಲ್ಲವೇ?ಕೋಟಿಗಟ್ಟಲೆ ಹಣವನ್ನು ಇದಕ್ಕೆ ಖರ್ಚು ಮಾಡುವ ಬದಲು ರೈಲ್ವೆ ಕಂಬಿ ಅಳವಡಿಕೆ, ಕಂದಕ ನಿರ್ಮಾಣ ಹಾಗೂ ರೈತರಿಗೆ ಪರಿಹಾರ ನೀಡಬಹುದಲ್ಲವೇ? ಇದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಸಭೆಯಲ್ಲಿ ಒಕ್ಕರುಳಿನಿಂದ ಆಗ್ರಹಿಸಲಾಯಿತು.