ಚಿಕ್ಕಮಗಳೂರು, ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರು ವುದನ್ನು ಕೊಪ್ಪ ತಾಲೂಕು ಹೇರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಸ್ವಾಗತಿಸಿದರು.
ಖ್ಯಾತನಮಕ್ಕಿ ಹುಲ್ಲು ಗಾವಲನ್ನು ಶಾಶ್ವತ ಗೋಮಾಳಕ್ಕೆ ಮೀಸಲಿಡಿ:
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರು ವುದನ್ನು ಕೊಪ್ಪ ತಾಲೂಕು ಹೇರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಸ್ವಾಗತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳಸಾ ತಾಲೂಕಿನ ಮಾವಿನಕೆರೆ ಗ್ರಾಮದ ಖ್ಯಾತನಮಕ್ಕಿ ಹುಲ್ಲು ಗಾವಲನ್ನು ಮಲೆನಾಡು ಗಿಡ್ಡು ಹಸುಗಳ ಸಂರಕ್ಷಣೆಗೆ ಶಾಶ್ವತ ಗೋಮಾಳಕ್ಕೆ ಮೀಸಲಿಡುವ ಜೊತೆಗೆ ಕ್ಷೀಣಿಸುವ ಹಂತದಲ್ಲಿರುವ ಈ ತಳಿ ಸಂರಕ್ಷಣೆಗೆ ಒತ್ತು ನೀಡಬೇಕೆಂದರು.
ಈ ಕಾರ್ಯಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ದೇಶದ ವಿಶಿಷ್ಟ ಗೋ ಸಂತತಿ ಮಲೆನಾಡು ಗಿಡ್ಡಗಳು ಕೇವಲ ಪಶ್ಚಿಮ ಘಟ್ಟ ಪ್ರದೇಶಗಳ ಹವಾಮಾನಕ್ಕೆ ಗಾಳಿ, ಚಳಿ, ಬಿಸಿಲಿಗೆ ಹೊಂದಿಕೊಂಡಿರುವಂತದ್ದು, ಪ್ರಸ್ತುತ ಈ ತಳಿ ಮಾನ್ಯತೆಯೊಂದಿಗೆ ವಿಶಿಷ್ಟ ತಳಿ ಸಾಲಿನಲ್ಲಿದ್ದು, ಪಶ್ಚಿಮ ಘಟ್ಟಗಳ ಅತೀ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಜಿಲ್ಲೆಯ ಕೆಲವು ಭಾಗ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕಾರವಾರ ವ್ಯಾಪ್ತಿಯಲ್ಲಿ ಈ ತಳಿ ಇದ್ದು, ೧೫ ರಿಂದ ೨೫ ವರ್ಷದವರೆಗೂ ಗಟ್ಟಿಯಾಗಿ ಬದುಕಬಲ್ಲದು ಎಂದು ವಿವರಿಸಿದ್ದಾರೆ.
ನೂರಾರು ಎಕರೆ ಗೋಮಾಳ ಮಲೆನಾಡು ಗಿಡ್ಡಗಳ ಮೇವಿಗಾಗಿಯೇ ಮೀಸಲಿದ್ದು, ಪ್ರಸ್ತುತ ಈ ಎಲ್ಲಾ ಪ್ರದೇಶ ಬಲಾಢ್ಯರ ಪಾಲಾಗಿರುವುದರಿಂದ ಮೇಯಲು ಜಾಗವಿಲ್ಲದೆ ಹಸಿವಿನಿಂದ ತತ್ತರಿಸಿ ಪ್ರಾಣ ಬಿಡುತ್ತಿವೆ. ಜೊತೆಗೆ ಮಾಂಸ ಮಾಫಿಯಾ ಪಾಲಾಗುತ್ತಿವೆ ಎಂದು ತಿಳಿಸಿದರು.
ಕಂಪನಿ ಎಸ್ಟೇಟ್‌ಗಳು ಹಾಗೂ ಮಾಲೀಕರ ಮಿತಿ ಮೀರಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ವಲಸೆ ರೋಹಿಂಗ್ಯಾಗಳ ಕ್ರೌರ್ಯಕ್ಕೆ ಅಳಿದುಳಿದ ಗೋವುಗಳು ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಗೋಮಾಳ ಸಂರಕ್ಷಿಸುವ ಮೂಲಕ ಗಿಡ್ಡ ತಳಿ ಗೋವುಗಳನ್ನು ಉಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.