ಮಂಗಳೂರು ಹೊರವಲಯದ ನಾಗುರಿ ಬಳಿಯ ಗರೋಡಿ ಎಂಬ ವಸತಿ ಪ್ರದೇಶದಲ್ಲಿ ಗುಡ್ಡ ಕುಸಿದು ಮನೆಗೆ ಬಿದ್ದು ಮೂರು ಮಂದಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಈ ಮುಂಗಾರಿನಲ್ಲಿ ಯಲ್ಲಿ ಸಂಭವಿಸಿದ ಮೊದಲ ಪ್ರಾಕೃತಿಕ ದುರಂತ ಇದಾಗಿದೆ.
ಮಂಗಳೂರು: ಮಂಗಳೂರು ಹೊರವಲಯದ ನಾಗುರಿ ಬಳಿಯ ಗರೋಡಿ ಎಂಬ ವಸತಿ ಪ್ರದೇಶದಲ್ಲಿ ಗುಡ್ಡ ಕುಸಿದು ಮನೆಗೆ ಬಿದ್ದು ಮೂರು ಮಂದಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಈ ಮುಂಗಾರಿನಲ್ಲಿ ಕರಾವಳಿಯಲ್ಲಿ ಸಂಭವಿಸಿದ ಮೊದಲ ಪ್ರಾಕೃತಿಕ ದುರಂತ ಇದಾಗಿದೆ.
ನಾಲ್ಕು ಬಾಡಿಗೆ ಮನೆಗಳಿದ್ದ ಹಳೆಯ ಹೆಂಚಿನ ಕಟ್ಟಡದ ಮೇಲೆ ಭಾರಿ ಮಳೆಗೆ ಗುಡ್ಡ ಕುಸಿದುಬಿದ್ದು ಈ ಅವಘಡ ನಡೆದಿದೆ. ಇದರಲ್ಲಿ ಎರಡು ಕುಟುಂಬಗಳಿಗೆ ಸೇರಿದ ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆ ದಾರುಣವಾಗಿ ಮೃತಪಟ್ಟವರು. ಘಟನೆಯಲ್ಲಿ ಮನೆಯಲ್ಲಿದ್ದ ಬಿಹಾರ ಮೂಲದ ಅನಾಮಿಕ ಚೌರಾಸಿಯಾ(8), ತನು ಚೌರಾಸಿಯಾ(3) ಮತ್ತು ಶಾಂತಾ(46) ಮೃತಪಟ್ಟ ನತದೃಷ್ಟರು. ಅಲ್ಕಾ(14), ಅನುಷಾ(11)ಮತ್ತು ಬಾಲಕೃಷ್ಣ(48) ರಕ್ಷಣಾ ಕಾರ್ಯಾಚರಣೆಯಲ್ಲಿ ಬದುಕಿದ್ದಾರೆ. ಉಡುಪಿ ಮೂಲದ ಬಾಲಕೃಷ್ಣ ಅವರ ಕುಟುಂಬ ಕಳೆದ 20 ವರ್ಷಗಳಿಂದ ಇಲ್ಲಿ ಗರೋಡಿ ಬಳಿ ವಾಸವಾಗಿತ್ತು. ಮಂಗಳೂರಲ್ಲಿ ಮಂಗಳವಾರ ರಾತ್ರಿ ಭಾರೀ ಮಳೆಯಾಗಿದ್ದು, ಮಳೆಯ ತೀವ್ರತೆಗೆ ಮನೆ ಹಿಂಭಾಗದಲ್ಲಿದ್ದ ಗುಡ್ಡ ಕುಸಿದು ಬಿದ್ದಿದೆ. ಇದರಿಂದಾಗಿ ಕೆಳ ಭಾಗದಲ್ಲಿ ನಾಲ್ಕು ಪ್ರತ್ಯೇಕ ಕುಟುಂಬಗಳು ವಾಸವಿದ್ದ ಈ ಹಳೆ ಹೆಂಚಿನ ಮನೆಯ ಕಟ್ಟಡಕ್ಕೆ ಮಣ್ಣು ಬಿದ್ದಿದ್ದು ಒಂದು ಭಾಗ ತೀವ್ರ ಹಾನಿಯಾಗಿದೆ.
ಬಿಹಾರ ಮೂಲದ ಲಾಲ್ ಬಾಬು (37) ಮತ್ತು ಆತನ ಪತ್ನಿ ಇಂದು (34) ಹಾಗೂ ಅವರ ನಾಲ್ಕು ಮಕ್ಕಳು ಒಂದು ಮನೆಯಲ್ಲಿ ಎಂಟು ವರ್ಷಗಳಿಂದ ನೆಲೆಸಿದ್ದರು. ಅಲ್ಕಾ(14), ಅನುಷ್ಕಾ(11), ಅನಾಮಿಕ (7) ಮತ್ತು ತನು (3) ಎಂಬ ಮಕ್ಕಳು ಜೊತೆಗೆ ಇದ್ದರು. ಈ ಪೈಕಿ ಅನಾಮಿಕ ಮತ್ತು ತನು ಮಕ್ಕಳು ಸಾವಿಗೀಡಾಗಿದ್ದಾರೆ. ಹಾನಿಗೀಡಾದ ಇನ್ನೊಂದು ಮನೆಯಲ್ಲಿ ಮೂಲತಃ ಉಡುಪಿ ಜಿಲ್ಲೆಯ ಬಾಲಕೃಷ್ಣ (40) ಮತ್ತು ಅವರ ಪತ್ನಿ ಶಾಂತಾ (35) ಕಳೆದ ಎಂಟು ತಿಂಗಳಿನಿಂದ ನೆಲೆಸಿದ್ದರು. ಈ ಪೈಕಿ ಶಾಂತ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಇವರ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದಾರೆ.
ಮೃತರಲ್ಲಿ ಅನಾಮಿಕ ಚೌರಾಸಿಯಾ ಕಪಿತಾನಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದರೆ, ಇನ್ನೊಬ್ಬಾಕೆ ತನು ಚೌರಾಸಿಯಾ ಪಡೀಲು ಕೊಡಕ್ಕಲ್‌ನ ಪರಿಶ್ರವಿ ಪ್ರೀಸ್ಕೂಲ್‌ನಲ್ಲಿ ಕಲಿಯುತ್ತಿದ್ದಳು. ಈ ಹಠಾತ್ ಅಗಲುವಿಕೆಗೆ ಇವರ ಶಾಲೆಗಳಲ್ಲಿ ಶೋಕಾಚರಣೆ ನಡೆಸಲಾಯಿತು.
ಬೆಚ್ಚನೆ ಮಲಗಿದ್ದಾಗ ಎರಗಿದ ಸಾವು:
ಬುಧವಾರ ನಸುಕಿನ ವೇಳೆಗೆ ಮಣ್ಣು ಕುಸಿದ ಘಟನೆ ಸಂಭವಿಸಿದೆ. ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬಸ್ಥರು ಹಠಾತ್ ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ್ದರು. ಇಲ್ಲಿನ ಒಂದೇ ಕಟ್ಟಡದಲ್ಲಿರುವ ಹಳೆಯ ಹೆಂಚಿನ ಮನೆಯನ್ನು ನಾಲ್ಕು ಬಾಡಿಗೆ ಮನೆಗಳನ್ನಾಗಿಸಿ ಪ್ರತ್ಯೇಕ ಬಾಡಿಗೆ ಕೊಡಲಾಗಿತ್ತು. ಭಾರೀ ಮಳೆಗೆ ಹಿಂಬದಿಯಿದ್ದ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.
ನಸುಕಿನ ಜಾವ ದುರಂತ:
ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆಯ ಹಿಂಭಾಗದಲ್ಲೇ ಘಟನೆ ನಡೆದಿದ್ದು, ಮೊದಲಿಗೆ ಪೊಲೀಸರು ಮತ್ತು ಸ್ಥಳೀಯರು ಸೇರಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ತಂಡ ಆಗಮಿಸಿ ಕ್ಷಿಪ್ರ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.ಬುಧವಾರ ನಸುಕಿನ ಜಾವ 4.45 ರಿಂದ 5 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಮೀಪದ ಗುಡ್ಡ ಏಕಾಏಕಿ ಕುಸಿದು ಮನೆ ಮೇಲೆ ಬಿದ್ದಿದೆ. ಇದರಿಂದಾಗಿ ಈ ಮನೆ ಹಿಂಭಾಗದ ಗೋಡೆಗಳು ಕುಸಿದಿದ್ದು, ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದವರ ಮೇಲೆ ಮಣ್ಣಿನಡಿ ಸಿಲುಕಿದ್ದಾರೆ. ಈ ವಿಚಾರ ತಿಳಿಯುತ್ತಲೇ ಅಗ್ನಿಶಾಮಕದಳ ಹಾಗೂ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದೆ. ಆರು ಮಂದಿ ಪೈಕಿ ಮೂರು ಮಂದಿಯನ್ನು ಪಾರು ಮಾಡುವಲ್ಲಿ ಸಫಲವಾಗಿದೆ. ಉಳಿದ ಮೂರು ಮಂದಿ ಪೈಕಿ ಇಬ್ಬರು ಹೆಣ್ಣಕ್ಕಳನ್ನು ಅವಶೇಷಗಳ ಅಡಿಯಿಂದ ತೆಗೆಯುವಾಗಲೇ ಮೃತಪಟ್ಟಿದ್ದರು. ಇನ್ನೋರ್ವ ಮಹಿಳೆ ಶಾಂತಾ ಅವರನ್ನು ಮಣ್ಣಿನಡಿಯಿಂದ ಹೊರಗೆ ತೆಗೆದಿದ್ದು, ಆದರೆ ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು. ಸದ್ಯ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಸಿ ಭೇಟಿ ಮಾರ್ಗದರ್ಶನ:
ಘಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದು ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದ್ದಾರೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಮುಂದುವರಿದಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರಕೃತಿಯ ಮುಂದೆ ಏನೂ ಮಾಡಲಾಗದು: ಘಟನೆ ಕುರಿತಂತೆ ಸ್ಥಳೀಯ ನಿವಾಸಿ ಜಗದೀಶ್ ಎಂಬವರು ಸುದ್ದಿಗಾರರಲ್ಲಿ ಮಾತನಾಡಿ, ಬುಧವಾರ ನಸುಕಿನ 4.45ರ ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಸ್ಥಳೀಯರು ಫೋನ್ ಕರೆ ಮಾಡಿ ನನಗೆ ವಿಚಾರ ತಿಳಿಸಿದರು. ದುರಂತದ ವಿಚಾರ ಗೊತ್ತಾದ ಕೂಡಲೇ ನಾನು ಇಲ್ಲಿಗೆ ಓಡಿ ಬಂದೆ. ಆಗ ಇನ್ನೂ ಬೆಳಕು ಹರಿದಿರಲಿಲ್ಲ. ಗುಡ್ಡ ಏಕಾಏಕಿ ಕುಸಿದ ಕಾರಣ ನಾಲ್ಲು ಮನೆಗಳ ಗೋಡೆಗಳು ಕುಸಿದುಬಿದ್ದಿದೆ. ನಾವು ಕಳೆದ 15 ವರ್ಷದಿಂದ ಇಲ್ಲೇ ಇದ್ದೇವೆ, ಏನೂ ತೊಂದರೆ ಇರಲಿಲ್ಲ. ಆದರೆ ಪ್ರಕೃತಿ ವಿಕೋಪದ ಮುಂದೆ ಏನೂ ಮಾಡಲಾಗದು ಎಂದರು.
ನಾವು ಕೂಡ ಹೊರಗೋಡಿ ಬಂದೆವು: ಏನೋ ಶಬ್ದ ಕೇಳಿಸಿದಂತಾಯಿತು. ತಕ್ಷಣ ಹೊರಗೆ ಬಂದು ನೋಡಿದಾಗ ಹೆಂಚನ ಮನೆ ಆಗಲೇ ಮಣ್ಣಿನಲ್ಲಿ ಸಿಲುಕಿತ್ತು. ಗುಡ್ಡದಿಂದ ಮಣ್ಣು ಕುಸಿಯುತ್ತಿರುವುದನ್ನು ಕಂಡು ನಾವು ಕೂಡ ಮನೆಯಿಂದ ಹೊರಗೋಡಿ ಬಂದೆವು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ನಮ್ಮ ಮನೆ ಸೇರಿದಂತೆ ನಾಲ್ಕು ಮನೆಗಳು ಹಾನಿಗೀಡಾಗಿವೆ. ಮನೆಯ ಹಿಂದೆ ಗೋಡೆ ಕಟ್ಟಿದ್ದರಿಂದ ಯಾವುದೇ ಅಪಾಯದ ಸಾಧ್ಯತೆ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಗೀತಾ ಘಟನೆಯ ವಿವರ ಮುಂದಿಟ್ಟುರು.
ಇನ್ನೊಂದೆಡೆ ಮನೆ ಧ್ವಂಸ: ನಿರಂತರ ಮಳೆಗೆ ಕೆರೆಬೈಲ್ ಗುಡ್ಡ ಪ್ರದೇಶದಲ್ಲಿ ಖಾಸಗಿ ಕಂಪನಿಯ ಕಂಪೌಂಡ್ ಗೋಡೆ ಕುಸಿದು ಕಿಶೋರ್ ಎಂಬವರ ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಕಂಪೌಂಡ್ ಗೋಡೆಯ ಉಳಿದ ಭಾಗವೂ ಕುಸಿಯುವ ಭೀತಿಯಲ್ಲಿದ್ದು, ಸುತ್ತಮುತ್ತಲಿನ ಮನೆಯವರು ಭೀತಿಗೆ ಸಿಲುಕಿದ್ದಾರೆ. ಈ ಕಂಪೌಂಡ್ ಗೋಡೆಯಲ್ಲಿ ಮೊದಲೇ ಬಿರುಕು ಕಾಣಿಸಿಕೊಂಡಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.