ಕೇರಳ ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ ಕೊಡಲಿ: ನಳಿನ್ ಕುಮಾರ್

KannadaprabhaNewsNetwork |  
Published : Jan 12, 2026, 03:00 AM IST
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕೇರಳದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂನ್ನು ಬೋಧಿಸಬೇಕು ಎಂದು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಮಸೂದೆ ಜಾರಿಗೊಳಿಸುವ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ಎಚ್ಚರಿಕೆ ನೀಡಬೇಕು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿ: ಕೇರಳದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂನ್ನು ಬೋಧಿಸಬೇಕು ಎಂದು ಅಲ್ಲಿನ ಕಮ್ಯುನಿಸ್ಟ್ ಸರ್ಕಾರ ಮಸೂದೆ ಜಾರಿಗೊಳಿಸುವ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ಎಚ್ಚರಿಕೆ ನೀಡಬೇಕು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಸರ್ಕಾರ ಹಿಂದೆಯೂ ಕನ್ನಡದ ನೆಲ ಕಾಸರಗೋಡಿನಲ್ಲಿ ಮಳಯಾಳಂ ಕಡ್ಡಾಯಗೊಳಿಸುವುದಕ್ಕೆ ಪ್ರಯತ್ನಿಸಿ, ನಮ್ಮ ಹಿರಿಯರ ಹೋರಾಟದಿಂದ ವಿಫಲಗೊಂಡಿತ್ತು. ಅಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವೇ ಪ್ರಧಾನ, ಈ ಸ್ಥಾನವನ್ನು ಉಳಿಸಿಕೊಡು, ಮಲಯಾಳಂ ಕಲಿಸಲಿ. ಇಲ್ಲವಾದರೆ ಜನರೇ ಉತ್ತರ ಕೊಡುತ್ತಾರೆ ಎಂದರು.

ಕೇರಳದಲ್ಲಿ ಕನ್ನಡ ಕೊನೆಗಾಣಿಸುವ ಪ್ರಯತ್ನ ನಡೆದರೆ ನಮ್ಮಲ್ಲೂ ಸಾಕಷ್ಟು ಮಂದಿ ಕೇರಳಿಗರಿದ್ದಾರೆ. ಇಲ್ಲಿ ಅವರ ವರ್ತನೆ ನೋಡಿದ್ದೇವೆ, ಅಲ್ಲಿನ ಸರ್ಕಾರ ಮಾಡಿದ್ದನ್ನು ನಮ್ಮ ಸರ್ಕಾರ ಇಲ್ಲಿ ಮಾಡಬೇಕಾಗುತ್ತದೆ, ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು, ಸಿಎಂ ಸಿದ್ದರಾಮಯ್ಯ ಕೇರಳ ಸರಕಾರಕ್ಕೆ ತೀವ್ರ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು. ಶಾಸಕಿಗೆ ಅವಹೇಳನ: ಆರೋಪಿಯನ್ನು ಬಂಧಿಸಲು ಆಗ್ರಹ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹವನ್ನು ಖಂಡಿಸಿದ ಕಟೀಲ್, ಜನರ ಒಲವಿನಿಂದ ಶಾಸಕಿಯಾಗಿದ್ದಾರೆ. ಅವರ ವಿರುದ್ಧ ಬರೆದಿದ್ದು, ದಲಿತ ಮಹಿಳೆಯ ಜಾತಿ ನಿಂದನೆಯಾಗಿದೆ, ಅಂಥವರ ವಿರುದ್ದ್ಧಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು.

ಸಿದ್ದರಾಮಣ್ಣನ ವಿರುದ್ಧ ಬರೆದರೆ ರಾತ್ರೋರಾತ್ರಿ ಪತ್ರಕರ್ತರನ್ನು ಎತ್ತಿಕೊಂಡು ಹೋಗಿ, 10-15 ದಿನ ಜೈಲಿಗೆ ಹಾಕಿದ್ದಾರೆ, ಸಿದ್ದರಾಮಯ್ಯ ವಿರುದ್ಧ ಬರೆದಾಗ ಏನು ಕಾನೂನು ಕ್ರಮ ಆಗಿದೆಯೋ ಅದೇ ಕ್ರಮ ಇಲ್ಲೂ ಆಗಬೇಕು. ತಕ್ಷಣ ಆ ವ್ಯಕ್ತಿಯನ್ನು ಬಂಧಿಸಬೇಕು ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಆದಷ್ಟು ಬೇಗ ಜ್ಯೋತಿಷ್ಯ ಕಾರ್ಯಾಲಯ ತೆರೆಯುವ ಅಂದಾಜು ಇದೆ ಎಂದು ನಳಿನ್ ಕುಮಾರ್ ಲೇವಡಿ ಮಾಡಿದರು. ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗುತ್ತದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಿವಕುಮಾರ್ ಇತ್ತೀಚೆಗೆ ಬಹಳಷ್ಟು ಬಾರಿ ಕೇರಳಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಅವರು ಜ್ಯೋತಿಷ್ಯ ಕಲಿಯುತ್ತಿದ್ದಾರೆ ಅನಿಸುತ್ತಿದೆ. ಅವರು ಜ್ಯೋತಿಷ್ಯ ಹೇಳಲು ಪ್ರಾರಂಭಿಸಿದ್ದಾರೆ. ಅವರಿಗೆ ಕಾಂಗ್ರೆಸ್ ತನ್ನನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಗೊತ್ತಾಗಿದೆ, ಆದ್ದರಿಂದ ಜ್ಯೋತಿಷ್ಯ ಕಾರ್ಯಾಲಯ ತೆರೆಯುವ ಅಂದಾಜಿದೆ ಎಂದರು.

ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದೆ. ಕರ್ನಾಟಕ ಗಾಂಧೀಜಿಯವರ ರಾಮ ರಾಜ್ಯ ಆಗುವ ಬದಲು ರಾವಣ ರಾಜ್ಯವಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೇ ಪಾಕಿಸ್ತಾನ ಪರ ಘೋಷಣೆ, ಪಾಕಿಸ್ತಾನ ಧ್ವಜ ಹಾರಾಟ, ಬೆಳಗಾವಿಯಲ್ಲಿ ಮುನಿಯ ಹತ್ಯೆ ಆಯಿತು, ಕೆಡಿಪಿ ಸಭೆಯಲ್ಲಿಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಮಾಡುತ್ತಾರೆ, ಬಳ್ಳಾರಿಯಲಿ ಶಾಸಕರ ಸಹವರ್ತಿ ಅವರದ್ದೇ ಕಾರ್ಯಕರ್ತನನ್ನು ಕೊಲ್ಲುತ್ತಾರೆ. ಇದೆಲ್ಲವನ್ನು ಸಿಎಂ, ಡಿಸಿಎಂ ಸಮರ್ಥಿಸುತ್ತಾರೆ. ಇದೆಲ್ಲ ಕಾಂಗ್ರೆಸ್ ಸರ್ಕಾರದ ಮಾನಸಿಕತೆಯನ್ನು ತೋರಿಸುತ್ತಿದೆ ಎಂದರು.

ನಮ್ಮಲ್ಲೂ ಸೀತೆಯ ಅಪಹರಣ, ಹಲ್ಲೆಗಳಾಗುತ್ತಿವೆ, ರಾವಣನು ಕೂಡ ಸಿದ್ದರಾಮಯ್ಯನಂತೆ ಜ್ಞಾನಿಯಾಗಿದ್ದ. ಸಿದ್ದರಾಮಯ್ಯನವರ ಹೆಸರು ಬದಲಾವಣೆಯಾಗುತ್ತಿದೆಯಾ ಸಂಶಯ ಮೂಡುತ್ತಿದೆ ಎಂದರು. ರಾಜ್ಯ ಕಾಂಗ್ರೆಸ್ ಸರಕಾರ ಕಾಂಗ್ರೆಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ನೀಡಿರುವುದು ತಪ್ಪು. ಸರ್ಕಾರದ ಹಣವನ್ನು ಈ ರೀತಿ ಬಳಸುವುದು ಆಕ್ಷೇಪಾರ್ಹ ಎಂದು ಹೇಳಿದರು.

ಹೆರಾಲ್ಡ್ ಪತ್ರಿಕೆಯ ಪ್ರಕರಣ ಸುಪ್ರೀಂಕೋರ್ಟಿನಲ್ಲಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜಾಮೀನಿನಲ್ಲಿದ್ದಾರೆ, ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ಪತ್ರಿಕೆಗೆ ರಾಜ್ಯ ಸರ್ಕಾರ ಒಂದೂವರೆ ಕೋಟಿ ಜಾಹೀರಾತು ನೀಡಿದೆ. ಸಿದ್ದರಾಮಯ್ಯ ಡಿಕೆಶಿ ತಮ್ಮ ಹಣ ಕೊಟ್ಟಿದ್ದರೆ ನಾವು ಕೇಳಲ್ಲ, ತಮ್ಮ ಕೈಯಿಂದ ಬೇಕಾದರೆ 100 ಕೋಟಿ ಕೊಡಲಿ. ಆದರೆ ಅವರು ಕೊಟ್ಟಿರುವುದು ಸರ್ಕಾರದ ಹಣ. ರಾಜ್ಯದ ಜನರ ಹಣ, ಅದಕ್ಕೆ ನಮ್ಮ ಆಕ್ಷೇಪ ಇದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ