ನಾಲ್ವಡಿ ಕೃಷ್ಣರಾಜ ಒಡೆಯರ್ ಅತ್ಯದ್ಭುತ ಆಡಳಿತಗಾರ: ಚುಂಚಶ್ರೀ

KannadaprabhaNewsNetwork | Updated : Nov 11 2024, 12:56 AM IST

ಸಾರಾಂಶ

ಮಹಾತ್ಮ ಗಾಂಧೀಜಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಅವರ ಕೊಡುಗೆಗಳು ಶಾಶ್ವತವಾಗಿ ಉಳಿದುಕೊಂಡಿವೆ. ನಾಡಿನ ಅಭಿವೃದ್ಧಿ ಮತ್ತು ಜನಸೇವೆಗಾಗಿ ನಾಲ್ವಡಿ ಅವರು ತಮ್ಮ ಜೀವನವನ್ನು ಸಮರ್ಪಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಶ ಕಂಡ ಅತ್ಯುತ್ತಮ ಆಡಳಿತಗಾರ ಮತ್ತು ಆದರ್ಶ ಮಹಾರಾಜ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬಣ್ಣಿಸಿದರು.

ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಆಯೋಜಿಸಿರುವ ಮಂಡ್ಯ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಅವರ ಕೊಡುಗೆಗಳು ಶಾಶ್ವತವಾಗಿ ಉಳಿದುಕೊಂಡಿವೆ. ನಾಡಿನ ಅಭಿವೃದ್ಧಿ ಮತ್ತು ಜನಸೇವೆಗಾಗಿ ನಾಲ್ವಡಿ ಅವರು ತಮ್ಮ ಜೀವನವನ್ನು ಸಮರ್ಪಿಸಿಕೊಂಡರು. ಅವರನ್ನು ನಿತ್ಯ ನೆನೆಯುವುದು ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ, 1940ರ ಅವಧಿಯಲ್ಲಿ ದೇಶದಲ್ಲಿ ಅತ್ಯುತ್ತಮ ಮಹಾರಾಜ ಎಂದು ನಾಲ್ವಡಿ ಅವರು ವಿದೇಶಿಗರ ಪ್ರಶಂಸೆಗೆ ಒಳಗಾಗಿದ್ದರು. ಸ್ವಾತಂತ್ರ್ಯ ನಂತರ ಜಾರಿಗೆ ಬಂದ ಸರ್ಕಾರಗಳಿಂದ ಇದುವರೆಗೂ ಅಂತಹದೊಂದು ಆಡಳಿತವನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕ ವಯಸ್ಸಿನಲ್ಲೇ ಮೈಸೂರು ಸಂಸ್ಥಾನದ ಆಡಳಿತ ಸೂತ್ರ ಹಿಡಿದ ನಾಲ್ವಡಿ ಅವರ ದೂರದೃಷ್ಟಿ, ಅಭಿವೃದ್ಧಿಪರ ಚಿಂತನೆಗಳು, ಆಡಳಿತ ವಿಧಾನ, ಕಾರ್ಯಧ್ಯಕ್ಷತೆ ಎಲ್ಲವೂ ಇಂದಿನವರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.

ನಾಡಿನ ಉದ್ದಗಲಕ್ಕೂ ಕೈಗಾರಿಕೆಗಳು, ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಕನ್ನಡಿಗರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ. ತಾಂತ್ರಿಕ ಶಿಕ್ಷಣ, ಮಹಿಳೆಯರಿಗೆ ಶಿಕ್ಷಣ, ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಮಾದರಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ಮಳವಳ್ಳಿ ಕ್ಷೇತ್ರದ ಶಾಸಕ ಪಿಎಂ ನರೇಂದ್ರಸ್ವಾಮಿ ಅವರು ಮಾತನಾಡಿ,‌ ಬ್ರಿಟಿಷ್ ಆಡಳಿತದ ಸೋಂಕಿಲ್ಲದೆ, ಯಾರ ಶೋಷಣೆಗೂ ಗುರಿಯಾಗದೆ ಮಾದರಿ ಆಡಳಿತವನ್ನು ಮೈಸೂರು ಸಂಸ್ಥಾನದ ಜನರಿಗೆ ದೊರಕಿಸಿಕೊಟ್ಟ ಕೀರ್ತಿ ನಾಲ್ವಡಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಜನರಿಗೆ ಬದುಕನ್ನು ಕಟ್ಟಿಕೊಟ್ಟವರು. ಬರಡಾಗಿದ್ದ ಭೂಮಿಯಲ್ಲಿ ಹಸಿರ ಸಮೃದ್ಧಿಯನ್ನು ತುಂಬಿ ಈ ನೆಲವನ್ನು ಬಂಗಾರವಾಗಿಸಿದರು. ಅವರನ್ನು ನೆನೆಯುವುದು ಮಂಡ್ಯ ಜನರ ಕರ್ತವ್ಯ ಮಾತ್ರವಲ್ಲ. ಇಡೀ ನಾಡು ಅವರನ್ನು ನೆನೆಯಬೇಕು ಎಂದು ಹೇಳಿದರು.

ಮೈಸೂರು ದಸರಾ ಉತ್ಸವ ಮಾದರಿಯಲ್ಲೇ ನಾಲ್ವಡಿ ಉತ್ಸವ ನಾಡಿನಾದ್ಯಂತ ನಡೆಯುವಂತಾಗಬೇಕು. ಪ್ರತಿಯೊಬ್ಬರ ಮನೆಯಲ್ಲೂ ನಾಲ್ವಡಿ ಅವರ ಫೋಟೋ ಇರಬೇಕು. ಎಲ್ಲೇ ಪ್ರತಿಮೆ ಸ್ಥಾಪನೆಯಾದರೂ ನಾಲ್ವಡಿ ಅವರ ಪ್ರತಿಮೆಗೆ ಮೊದಲ ಪ್ರಶಸ್ತಿ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಕಿ ರಹಿತ ಅಡುಗೆ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ಉಡುಗೊರೆಗಳನ್ನು ನೀಡಲಾಯಿತು.

ಚಿತ್ರನಟರಾದ ರವಿಶಂಕರ್, ಸಚಿನ್ ಚಲುವರಾಯಸ್ವಾಮಿ, ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಸತೀಶ್ ಸಂದೇಶ್ ಹಾಗೂ ಪತ್ರಕರ್ತ ಮತ್ತಿಕೆರೆ ಜಯರಾಮ್ ಅವರನ್ನು ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ನಾಗೇಂದ್ರ ಮುಡಾ ಅಧ್ಯಕ್ಷ ನಹೀಂ, ಮುಖಂಡರಾದ ಎಸ್ ಸಚ್ಚಿದಾನಂದ, ಹನಕೆರೆ ಶಶಿಕುಮಾರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಥೆ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಹೆಚ್.ಎನ್. ಯೋಗೇಶ್, ವಿನಯ್ ರಾಮಕೃಷ್ಣ ಸೇರಿದಂತೆ ಇತರರಿದ್ದರು.

Share this article