ಕಿಕ್ಕರ್: ಮಲ್ಲೂರು ಗ್ರಾಮದ ರೈತರ ಪರದಾಟ । ಸಮಸ್ಯೆ ಬಗೆಹರಿಸಲು ಎಸಿಗೆ ರೈತರ ಮನವಿ
ಸಮೀಪದ ಮಲ್ಲೂರ ಗ್ರಾಮದ ಕಾಗಿಹಾಳ ಸರಹದ್ದಿನ ಸರ್ವೇ ನಂ.3 ಮತ್ತು 4 ರ ಜಮೀನುಗಳಿಗೆ ಸಂಬಂಧಿಸಿದಂತೆ ಎಲ್ಲ ಸರ್ವೇ ನಂಬರ್‌ಗಳನ್ನು ಉತಾರಗಳಲ್ಲಿ ಒಟ್ಟುಗೂಡಿಸಿದ್ದು, ಇದರಿಂದ ವಾರಸಾ ದಾಖಲ ಮಾಡಲು, ಹದ್ದು ಬಸ್ತು, ವಾಟ್ನಿ, ಪೋಡಿ ಮಾಡಲು ಸಮಸ್ಯೆಯಾಗಿದೆ. ಅಲ್ಲದೇ, ಸರ್ಕಾರದಿಂದ ಬರುವ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ಯಾವದೇ ಪರಿಹಾರಗಳು ಬರುತ್ತಿಲ್ಲ. ಇದರಿಂದ ರೈತರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ನೇಗಿಲ ಯೋಗಿ ರೈತ ಸಂಘದಿಂದ ಮಲ್ಲೂರ ಗ್ರಾಮದ ರೈತರು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರಿಗೆ ಮನವಿ ಸಲ್ಲಿಸಿದರು.
ಉಪವಿಭಾಗಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ರೈತರು ತಮಗಾಗುತ್ತಿರುವ ತೊಂದರೆ ಕುರಿತು ಅಧಿಕಾರಿ ಮುಂದೆ ವಿವರಿಸಿದರು. 2019- 20ರಲ್ಲಿ ಬೇರೆ, ಬೇರೆ ಇದ್ದ ರೈತರ ಉತಾರಗಳನ್ನು 2023 ರಲ್ಲಿ ಒಟ್ಟುಗೂಡಿಸಿದ್ದಾರೆ. ಆವತ್ತಿನಿಂದ ಇಲ್ಲಿಯವರೆಗೆ ಸರ್ವೇ ನಂ.3 ಮತ್ತು 4 ರಲ್ಲಿ 44 ಜನ ರೈತರ ಹೆಸರು ಸೇರ್ಪಡೆ ಆಗಿವೆ. ರೈತರು ಯಾರಾದರೂ ಒಬ್ಬರು ಉತಾರ ಪಡೆಯಲು ಹೋದರೆ 44 ಜನ ರೈತರ ಹೆಸರು ಬರುತ್ತಿವೆ. ಇದರಿಂದ ರೈತರಿಗೆ ಅನಾನೂಕೂಲ ಆಗುತ್ತಿದೆ. ಮೊದಲೇ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮುತುವರ್ಜಿ ವಹಿಸಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯ ಮಾಡಿದರು.ಮಲಪ್ರಭಾ ನದಿಯಿಂದ ನಿರಾಶ್ರಿತರಾದ ರೈತರಿಗೆ ಇಲ್ಲಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಅವುಗಳಿಗೆಲ್ಲ ಸರಿಯಾದ ನಕ್ಷೆ ಇಲ್ಲ, ರಸ್ತೆ ಇಲ್ಲ. ಇದರಿಂದ ರೈತರಿಗೆ ಬಹಳ ತೊಂದರೆಯಾಗಿದ್ದು, ಕೂಡಲೇ ಮೇಲಾಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.