ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕ್ಷೇತ್ರದ ಶಾಸಕರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದ್ದು, ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಆರಂಭಗೊಂಡಿದೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿಯಾಗಬೇಕು ಎನ್ನುವುದು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆದರೆ, ಇದಕ್ಕೆ ಒಪ್ಪದ ಡಿ.ಕೆ.ಸುರೇಶ್ ಕ್ಷೇತ್ರದಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿಸಿದೆ.
ಸುರೇಶ್ ಅಚ್ಚರಿ ಅಭ್ಯರ್ಥಿ ಹೇಳಿಕೆ: ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ರಾಮನಗರದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಸುರೇಶ್ ಈ ಬಾರಿಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದರು. ಮಂಗಳವಾರ ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಸಹ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಸುರೇಶ್, ಚನ್ನಪಟ್ಟಣದಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದು, ಇದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅಚ್ಚರಿ ಅಭ್ಯರ್ಥಿ ಯಾರು ಎಂಬ ಕುರಿತು ಚರ್ಚೆಗಳು ಹುಟ್ಟುಹಾಕುವಂತೆ ಮಾಡಿದೆ.ಅಭ್ಯರ್ಥಿಯಾಗುವರೇ ರಘುನಂದನ್ ರಾಮಣ್ಣ:
ಸುರೇಶ್ ಸ್ಪರ್ಧೆಗೆ ಒಪ್ಪದಿದ್ದಲ್ಲಿ ಬಿಎಂಐಸಿಂಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ೨೦೧೧ರ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಘುನಂದನ್ ರಾಮಣ್ಣ, ಸಿ.ಪಿ.ಯೋಗೇಶ್ವರ್ ವಿರುದ್ಧ ಸೋಲು ಅನುಭವಿಸಿದ್ದರು. ಆ ನಂತರ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡಿದ್ದ ಅವರು, ರಾಜಕೀಯ ಕ್ಷೇತ್ರದಿಂದ ದೂರವುಳಿದಿದ್ದರು. ೨೦೨೨ರಲ್ಲಿ ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷರಾಗಿ ನೇಮಕಗೊಂಡ ಅವರು, ಕೆಲವು ತಿಂಗಳ ಹಿಂದೆಯಷ್ಟೇ ಬಿಎಂಐಸಿಎಪಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೈಸೂರು ರಾಜ್ಯದ ಮೊದಲ ವಿದ್ಯಾಮಂತ್ರಿ ವಿ.ವೆಂಕಟಪ್ಪ ಅವರ ಮೊಮ್ಮಗ ರಘುನಂದನ್. ಅವರ ಚಿಕ್ಕಪ್ಪ ಟಿ.ವಿ.ಕೃಷ್ಣಪ್ಪ ಸಹ ಎರಡು ಬಾರಿ ಚನ್ನಪಟ್ಟಣದ ಶಾಸಕರಾಗಿದ್ದರು. ತಂದೆ ರಾಮಣ್ಣ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು, ಅವರ ತಾಯಿ ವಿಜಯಲಕ್ಷ್ಮೀ ರಾಮಣ್ಣ ಎಐಸಿಸಿ ಸದಸ್ಯರಾಗಿದ್ದರು. ರಾಜಕೀಯ ಕುಟುಂಬದ ಹಿನ್ನೆಲೆ ಇರುವ ರಘುನಂದನ್ ರಾಮಣ್ಣ ಅವರಿಗೆ ಇನ್ನೊಂದು ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.ಅಚ್ಚರಿ ಅಭ್ಯರ್ಥಿಯಾಗುವರೇ ದುಂತೂರು ವಿಶ್ವನಾಥ್?:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್ ಏನಾದರೂ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಯುವರೇ ಎಂಬ ಗುಸುಗುಸು ಆರಂಭಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ದುಂತೂರು ವಿಶ್ವನಾಥ್ ಕಣಕ್ಕಿಳಿಯುವ ಕುರಿತು ಚರ್ಚೆಗಳು ನಡೆದಿದ್ದವು. ಆದರೆ ಅವರು ಅದನ್ನು ನಿರಾಕರಿಸಿದ್ದರು. ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣದ ಉಸ್ತುವಾರಿ ಹೊತ್ತ ಅವರು ಇಲ್ಲೇ ಬೀಡುಬಿಟ್ಟು ಕಾಂಗ್ರೆಸ್ ಮತಹೆಚ್ಚಳಕ್ಕೆ ಶ್ರಮಿಸಿದ್ದರು. ಈ ಬಾರಿ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಇರಾದೆ ಡಿ.ಕೆ.ಸಹೋದರರಿಗೆ ಇದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂತರ ಕಾಂಗ್ರೆಸ್ ಅಂಗಳದಲ್ಲಿ ಒಂದೆರಡು ಬಾರಿ ಕಾಣಿಸಿಕೊಂಡಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಹ ಭೇಟಿಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ನಿಶಾ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ಮತ್ತೆ ನಿಶಾ ಯೋಗೇಶ್ವರ್ ಹೆಸರು ಕೇಳಿಬರುತ್ತಿದೆ.
ಇನ್ನು ಜೆಡಿಎಸ್‌ನ ಪ್ರಮುಖ ಮುಖಂಡರೊಬ್ಬರಿಗೆ ಡಿ.ಕೆ.ಸಹೋದರರು ಗಾಳ ಹಾಕಿದ್ದು, ಅದು ಯಶಸ್ವಿಯಾದರೆ ಅವರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆದಿದೆ ಎನ್ನಲಾಗಿದೆ. ಕಡೆಗೆ ಡಿ.ಕೆ.ಸುರೇಶ್ ಅವರೇ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ.ಪ್ರತಿ ಚುನಾವಣೆಗೂ ಹೊಸ ಅಭ್ಯರ್ಥಿ!:
ಇನ್ನು ಯೋಗೇಶ್ವರ್ ಕಾಂಗ್ರೆಸ್ ತ್ಯಜಿಸಿದ ನಂತರ ಪ್ರತಿ ಚುನಾವಣೆಯಲ್ಲೂ ಕಡೆ ಕ್ಷಣದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪರಿಪಾಠವನ್ನು ಕಾಂಗ್ರೆಸ್ ಬೆಳೆಸಿಕೊಂಡು ಬಂದಿದೆ. ೨೦೧೧ರ ವಿಧಾನಸಭೆ ಉಪಚುನಾವಣೆಯಲ್ಲಿ ರಘನಂದನ್ ರಾಮಣ್ಣ ಅವರನ್ನು ಕಣಕ್ಕೆ ಇಳಿಸಿದರೆ, ೨೦೧೩ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರೂ ಸಹ ಅವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಶಾಸಕ ಸಾದತ್ ಅಲಿಖಾನ್‌ಗೆ ಮಣೆಹಾಕಲಾಗಿತ್ತು.ಇನ್ನು ೨೦೧೮ರ ವಿಧಾಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ರನ್ನು ಕಣಕ್ಕಿಳಿಸಲಾಗಿತ್ತು. ೨೦೨೩ರ ಚುನಾವಣೆಗೆ ಈ ಗೊಂದಲವೇ ಬೇಡ ಎಂದು ವರ್ಷಕ್ಕೂ ಮೊದಲೇ ಪ್ರಸನ್ನ ಪಿ.ಗೌಡರನ್ನು ಕರೆತಂದು ಕ್ಷೇತ್ರದ ಹೊಣೆ ವಹಿಸಿ, ಅವರನ್ನೇ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಿಸಲಿಲ್ಲ ಎಂದು ಮುನಿದ ಪ್ರಸನ್ನ ಜೆಡಿಎಸ್ ಸೇರ್ಪಡೆಗೊಂಡಿದ್ದರು. ಇದರ ಪರಿಣಾಮ ಮತ್ತೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ರನ್ನು ಕಣಕ್ಕಿಳಿಸಲಾಗಿತ್ತು.
ಇದೀಗ ಮತ್ತೊಂದು ಉಪಚುನಾವಣೆ ಎದುರಾಗುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡವಂತೆ ಮಾಡಿದೆ.