ಯಲಬುರ್ಗಾ: ಇತ್ತೀಚಿನ ದಿನಗಳಲ್ಲಿ ನಾಮಕರಣ ಕಾರ್ಯಕ್ರಮಗಳು ಆಡಂಬರ, ಆಚಾರ-ವಿಚಾರಗಳ ಪ್ರದರ್ಶನ ಹಾಗೂ ಅತಿಥಿಗಳ ಸತ್ಕಾರಕ್ಕೆ ಸೀಮಿತವಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಪಿಎಸ್‌ಐ ಹಾಗೂ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.
ಮನಗುಳಿಯ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶರಣರ ಹೆಸರಿಡುವುದು ಎಷ್ಟು ಮುಖ್ಯವೋ, ಆ ಹೆಸರಿಗೆ ತಕ್ಕಂತೆ ಅವರು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಮನೆಯಲ್ಲಿ ಪ್ರತಿನಿತ್ಯ ಶರಣರ ವಚನಗಳನ್ನು ಪ್ರಾರ್ಥನೆಯ ರೂಪದಲ್ಲಿ ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಬೇಕು. ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ನಾಮಕರಣ ಮಾಡುವುದೆಂದರೆ ಕೇವಲ ಹೆಸರಿಡುವುದಲ್ಲ. ಮಗುವನ್ನು ಸಮಾಜದ ಜವಾಬ್ದಾರಿಯುತ, ಸಂಸ್ಕಾರವಂತ ಹಾಗೂ ಕಾಯಕನಿಷ್ಠ ಪ್ರಜೆಯನ್ನಾಗಿ ರೂಪಿಸುವ ಮೊದಲ ಹೆಜ್ಜೆಯಾಗಿದೆ ಎಂದರು.
ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ವಚನ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ಸದಾಚಾರ ಹಾಗೂ ವೈಚಾರಿಕತೆಯ ಮೌಲ್ಯ ಬಿತ್ತಿದ ಮಹಾನ್ ಪರಂಪರೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಅರ್ಥವಿಲ್ಲದ ಹಾಗೂ ವಿಚಿತ್ರ ಹೆಸರುಗಳ ಬೆನ್ನತ್ತದೆ, ಜೀವನಕ್ಕೆ ಪ್ರೇರಣೆ ನೀಡುವ ಅರ್ಥಪೂರ್ಣ ಹೆಸರುಗಳನ್ನು ಮಕ್ಕಳಿಗೆ ಇಡುವುದು ಅಗತ್ಯ ಎಂದರು.ಮರಕಟ್ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿ, ನಾಮಕರಣದ ದಿನದಿಂದಲೇ ಮಗುವಿನ ಸುತ್ತ ಜ್ಞಾನ ಮತ್ತು ಭಕ್ತಿಯ ವಾತಾವರಣ ನಿರ್ಮಿಸಬೇಕು. ವಚನ ಸಾಹಿತ್ಯವು ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಜಾತೀಯತೆಯನ್ನು ವಿರೋಧಿಸಿದೆ ಎಂದರು.
ಶರಣ ದಂಪತಿಗಳಾದ ಅಮರೇಶಪ್ಪ ಬಳ್ಳಾರಿ ಹಾಗೂ ಬಸವರಾಜ ಹೂಗಾರ ಅವರನ್ನು ಗೌರವಿಸಲಾಯಿತು.