ಕನ್ನಡಪ್ರಭ ವಾರ್ತೆ ಮಂಗಳೂರು
ನಮ್ಮ ಕುಡ್ಲ ವಾಹಿನಿ ವತಿಯಿಂದ ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ಅಕ್ಟೋಬರ್ 30ರಂದು 25ನೇ ವರ್ಷದ ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ-2024 ನಡೆಯಲಿದೆ.ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 11 ಗಂಟೆಗೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಮತ್ತಿತರರು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಗೂಡುದೀಪಗಳಿಗೆ ಚಿನ್ನದ ಪದಕ: ಸ್ಪರ್ಧೆಯು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ‘ಚಿನ್ನದ ಪದಕ’ ಹಾಗೂ ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಹಾಗೂ 50 ಪ್ರೋತ್ಸಾಹಕ ಬಹುಮಾನಗಳಿವೆ ಎಂದರು.ಸುಮನ್ ತಲ್ವಾರ್‌ಗೆ ನಮ್ಮ ಕುಡ್ಲ ಪ್ರಶಸ್ತಿ: ದುಬೈಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಭಿ ಇವರಿಗೆ ‘ನಮ್ಮ ತುಳುವೆರ್’ ಪ್ರಶಸ್ತಿ, ಕರಾವಳಿ ಮೂಲದ ತೆಲುಗು ನಟ ಸುಮನ್ ತಲ್ವಾರ್‌ಗೆ ‘ನಮ್ಮ ಕುಡ್ಲ’ ಪ್ರಶಸ್ತಿ, ಬೆಂಗಳೂರಿನ ಬಿಲ್ಲವ ಅಸೋಸಿಯೇಷನ್‌ಗೆ ‘ಬಿ. ಪಿ. ಕರ್ಕೇರ’ ಪ್ರಶಸ್ತಿ, ಶಶಿಕಲಾ ಬಾಲಕೃಷ್ಣ ಅವರಿಗೆ ಲಕ್ಷ್ಮೀ ಕರ್ಕೇರ ಸೇವಾ ಪ್ರಶಸ್ತಿ ಹಾಗೂ ಮಂಗಳೂರು ದಸರಾ ಮೆರವಣಿಗೆಯಲ್ಲಿ ವೀಣಾಪಾಣಿ ಶಾರದೆಯ ದೃಶ್ಯರೂಪದಲ್ಲಿ ನಿರಂತರ 10 ಘಂಟೆಗಳ ಕಾಲ ಶಾರದೆಯ ಪ್ರತಿರೂಪದಲ್ಲಿ ಕಂಗೊಳಿಸಿ,ಲಕ್ಷಾಂತರ ಜನರ ಚಿತ್ತಾಪಹಾರ ಮಾಡಿರುವ ನಾಲ್ಕು ವರ್ಷದ ಅಪೂರ್ವ ಬಾಲ ಪ್ರತಿಭೆ ಸುರತ್ಕಲ್‌ನ ತ್ರಿಷ್ಣಾ ನವೀನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.ನಿರ್ದೇಶಕರಾದ ಹರೀಶ್ ಬಿ. ಕರ್ಕೇರಾ, ಸುರೇಶ್ ಬಿ. ಕರ್ಕೇರಾ, ಪ್ರೊ.ಎಂ. ಎಸ್. ಕೋಟ್ಯಾನ್, ದಯಾನಂದ ಕಟೀಲ್, ಮೋಹನ್ ಬಿ. ಕರ್ಕೇರಾ, ಲೀಲಾಕ್ಷ ಬಿ. ಕರ್ಕೇರಾ, ಸಂತೋಷ ಬಿ. ಕರ್ಕೇರಾ ಇದ್ದರು.