ಪ್ರಯಾಣಿಕರಿಂದ ಪ್ರತಿ ತಿಂಗಳು ಮೆಟ್ರೋ ₹5 ಲಕ್ಷ ದಂಡ ಸಂಗ್ರಹ

KannadaprabhaNewsNetwork |  
Published : May 31, 2024, 02:16 AM ISTUpdated : May 31, 2024, 05:19 AM IST
ನಮ್ಮ ಮೆಟ್ರೋ | Kannada Prabha

ಸಾರಾಂಶ

ಅವಧಿ ಮೀರಿ ನಿಲ್ದಾಣದಲ್ಲಿ ಉಳಿದ ಪ್ರಯಾಣಿಕರಿಂದ ದಂಡ ಸಂಗ್ರಹ ಮಾಡಿದ್ದು, 5 ಲಕ್ಷ ರು. ಒಟ್ಟಾರೆ ದಂಡ ವಿಧಿಸಿದೆ.

ಮಯೂರ್‌ ಹೆಗಡೆ

 ಬೆಂಗಳೂರು :  ‘ನಮ್ಮ ಮೆಟ್ರೋ’ ನಿಲ್ದಾಣದ ಒಳಗೆ ನಿಗದಿತ ಅವಧಿ ಮೀರಿ ಉಳಿಯುವ ಪ್ರಯಾಣಿಕರಿಂದ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಬೊಕ್ಕಸಕ್ಕೆ ಪ್ರತಿ ತಿಂಗಳು ₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ದಂಡದ ರೂಪದಲ್ಲಿ ಸೇರುತ್ತಿದೆ.

ಮೆಟ್ರೋ ವ್ಯಾಪ್ತಿಯ 66 ನಿಲ್ದಾಣಗಳಲ್ಲಿ ಪ್ರತಿ ತಿಂಗಳು ಸರಾಸರಿ 7 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಸರಾಸರಿ 1.50 ಲಕ್ಷ ಪ್ರಯಾಣಿಕರು ನಿಲ್ದಾಣದ ಒಳಗಡೆ ಹೆಚ್ಚು ಹೊತ್ತು ಉಳಿದ ಕಾರಣಕ್ಕೆ ದಂಡ ತೆತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ ₹32 ಲಕ್ಷಕ್ಕೂ ಅಧಿಕ ದಂಡವನ್ನು ನಿಗಮ ಕಟ್ಟಿಸಿಕೊಂಡಿದೆ.

ಹೆಚ್ಚುವರಿ ಪ್ರಯಾಣ:

ಜೊತೆಗೆ ನಿಶ್ಚಿತ ನಿಲ್ದಾಣದಲ್ಲಿ ಇಳಿಯದೆ ಮುಂದಿನ ನಿಲ್ದಾಣಗಳಲ್ಲಿ ಇಳಿಯುವ ಪ್ರಕರಣಕ್ಕೆ ಸಂಬಂಧಿಸಿ ನಿಲ್ದಾಣಗಳ ನಡುವಿನ ಅಂತರದ ಆಧಾರದ ಮೇಲೆ ಟಿಕೆಟ್‌ ಮೊತ್ತವನ್ನು ಮಾತ್ರ ಕಟ್ಟಿಸಿಕೊಳ್ಳುತ್ತಿದೆ. ಪ್ರಸ್ತುತ ಬಿಎಂಆರ್‌ಸಿಎಲ್‌ ಇದನ್ನು ದಂಡ ಎಂದು ಪರಿಗಣಿಸುತ್ತಿಲ್ಲ. ಆದರೆ, ಸಂಗ್ರಹವಾದ ಟಿಕೆಟ್‌ ಮೊತ್ತವನ್ನು ಪ್ರತ್ಯೇಕಿಸದೆ ನಿಲ್ದಾಣದಲ್ಲಿ ಹೆಚ್ಚುವರಿ ಹೊತ್ತು ಉಳಿದ ದಂಡದೊಂದಿಗೆ ಸೇರಿಸಿದೆ.

ಕಿರಿಕಿರಿ ತಪ್ಪಿಸಲು ದಂಡ:

ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ ಪಡೆದ ವ್ಯಕ್ತಿ ಪ್ರಯಾಣದ ಬಳಿಕ ನಿಲ್ದಾಣದಲ್ಲಿ 20 ನಿಮಿಷ ಇರಬಹುದು. ಅದಕ್ಕಿಂತ ಹೆಚ್ಚು ಅವಧಿ ಉಳಿದರೆ ₹5, ₹10 ದಂಡ ವಿಧಿಸಲಾಗುತ್ತಿದೆ. ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಆಗಬಾರದು. ಸಹ ಪ್ರಯಾಣಿಕರಿಗೆ ತೊಂದರೆ, ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಬಿಎಂಆರ್‌ಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್‌ ಕಾರ್ಡ್‌, ದಿನದ ಪಾಸ್‌ ಇದ್ದರೆ ನಿಲ್ದಾಣದಿಂದ ಹೊರಬರುವ ವೇಳೆ ಸ್ವಯಂ ಚಾಲಿತವಾಗಿ ಈ ಮೊತ್ತ ಕಡಿತವಾಗುತ್ತದೆ. ಟೋಕನ್‌ ಪಡೆದಿದ್ದಲ್ಲಿ ಕೌಂಟರ್‌ಗೆ ದಂಡ ಕಟ್ಟಬೇಕಾಗುತ್ತದೆ.ಇತರೆ ದಂಡ

ಇದಲ್ಲದೆ, ಸಹ ಪ್ರಯಾಣಿಕರ ಜೊತೆಗೆ ಅನುಚಿತ ವರ್ತನೆ, ರೈಲಿನಲ್ಲಿ ತಿಂಡಿ ಸೇವನೆ, ದೇಣಿಗೆ ಸಂಗ್ರಹ, ರೀಲ್ಸ್‌ ಮಾಡುವುದು ಸೇರಿ ಇನ್ನಿತರ ಕಾರಣಕ್ಕೂ ನಿಗಮ ತಪ್ಪಿತಸ್ಥರಿಂದ ₹500 ದಂಡವನ್ನು ಕಟ್ಟಿಸಿಕೊಳ್ಳುತ್ತಿದೆ. ಒಂದು ವರ್ಷದಲ್ಲಿ ಇಂತಹ ಹತ್ತಕ್ಕೂಹೆಚ್ಚಿನ ಪ್ರಕರಣಗಳು ನಡೆದಿವೆ. ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ ಬಳಿಕ ಈ ಪ್ರಕರಣಗಳಿಗೆ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದ್ದ ₹500 ದಂಡವನ್ನು ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ.

PREV