ನಂದಿ ಕೃಷಿ ಉಳಿದರೆ ಮಾತ್ರ ನಾಗರಿಕತೆ ಉಳಿವು

KannadaprabhaNewsNetwork |  
Published : Mar 14, 2025, 01:30 AM IST
ನಂದಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ನಂದಿ ಕೃಷಿ‌ ಉಳಿದರೆ ಮಾತ್ರ ನಾಗರಿಕತೆ ಉಳಿಯಲು ಸಾಧ್ಯ ಎಂಬುದನ್ನು ನಾನು ಸುಮಾರು 50 ದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದು ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.ನಂದಿ ಕೃಷಿ, ಉಳಿದರೆ ಮಾತ್ರ ನಾಗರಿಕತೆ ಉಳಿವು, 50 ದೇಶಗಳ ಅನುಭವ, ಡಾ.ಚಂದ್ರಶೇಖರ ಬಿರಾದಾರ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಂದಿ ಕೃಷಿ‌ ಉಳಿದರೆ ಮಾತ್ರ ನಾಗರಿಕತೆ ಉಳಿಯಲು ಸಾಧ್ಯ ಎಂಬುದನ್ನು ನಾನು ಸುಮಾರು 50 ದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದು ಅಂತಾರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ಹೇಳಿದರು.

ಪಟ್ಟಣದ ಮೂಲನಂದೀಶ್ವರ ದೇವಸ್ಥಾನದ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ನಂದಿ ಸತ್ಯಾಗ್ರಹದ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಂದಿ‌ ಕೃಷಿಯೊಂದಿಗೆ ಆಧುನಿಕ ತಂತ್ರ ಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ. ಅದಕ್ಕಾಗಿ, ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನವನ್ನು ನೀಡುವ ಯೊಜನೆಯೊಂದನ್ನು ಜಾರಿಗೆ ತರಲು ಸರ್ಕಾರದ‌ ಮಟ್ಟದಲ್ಲಿ ಸತತವಾಗಿ ಪ್ರಯತ್ನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಂದಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಬಸವರಾಜ ಬಿರಾದಾರ ಮಾತನಾಡಿ, ಕಳೆದ 11 ದಿನಗಳಿಂದ ನಡೆದ ನಂದಿ ಸತ್ಯಾಗ್ರಹಕ್ಕೆ ವಿವಿಧ ಸ್ಥಳಗಳ ಸ್ವಾಮೀಜಿಗಳು ಹಾಗೂ ಹಿರಿಯರ ನೇತೃತ್ವದಲ್ಲಿ ಕೃಷಿಕರು ಅಗಮಿಸಿ ನಿರಂತರವಾಗಿ ಬೆಂಬಲವನ್ನು ನೀಡಿದ್ದಾರೆ. ವಿವಿಧ ರೈತ ಸಂಘಟನೆಗಳು, ವಿವೇಕ ಬ್ರಿಗೇಡ್, ಸ್ಥಳೀಯ ಗೊಬ್ಬರ ಮಾರಾಟಗಾರರ ಸಂಘ, ಪಂಚಸೇನಾ ಹಾಗೂ ಇತರ ಸಂಘ ಸಂಸ್ಥೆಗಳು ಬೆಂಬಲವನ್ನು ನೀಡಿವೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಬಸವನಬಾಗೇವಾಡಿ ಘಟಕದ ವತಿಯಿಂದ ಕವಿಗೋಷ್ಠಿ ಆಯೋಜಿಸಿ ಬಹು ಜನರಿಗೆ ಜೋಡೆತ್ತಿನ ಕೃಷಿಕರ ಮಹತ್ವ ತಿಳಿಸುವ ಪ್ರಯತ್ನ ಮಾಡಿದೆ ಎಂದು ಮಾಹಿತಿ ನೀಡಿದರು.

ಗುರು-ಶಿಷ್ಯ ಪರಂಪರೆಯ ಪುನಃಸ್ಥಾಪನೆಯ ಉದ್ದೇಶದಿಂದ ಪ್ರಾರಂಭಿಸಿದ ನಂದಿ ಸತ್ಯಾಗ್ರಹವು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರ ಸಂಕಲ್ಪದಂತೆ ಜೋಡೆತ್ತಿನ‌ ಕೃಷಿ ಪುನಶ್ಚೇತನ ಕಾರ್ಯದ ಕೂಗು ಇಂದು ರಾಜ್ಯವಾಪಿಯಾಗಿ ಪಸರಿಸಿದೆ. ಬಸವನ ಬಾಗೇವಾಡಿಯಲ್ಲಿ ಜರುಗಿದ ನಂದಿ ಸತ್ಯಾಗ್ರಹವು‌ ನಂದಿ ಸಂತತಿ ವೃದ್ದಿಗಾಗಿ ಗುರು-ಶಿಷ್ಯರನ್ನು ಒಂದಾಗಿಸಲು ಯಶಸ್ವಿಯಾಗಿದೆ. ಇನ್ನು ಮುಂದೆ ರಾಜ್ಯದ ಎಲ್ಲ‌ ಗುರು-ಶಿಷ್ಯರು ಒಂದಾಗಿ ಪ್ರಯತ್ನಿಸಿದರೆ ಖಂಡಿತವಾಗಿ ಜೋಡೆತ್ತಿನ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆಯನ್ನು ಆದಷ್ಟು ಬೇಗನೆ ಜಾರಿಗೆ ತರಬಹುದು. ಈ ಮೂಲಕ ನಂದಿ ಸಂಪತ್ತು ಕಾಸಾಯಿ ಖಾನೆಯ ಪಾಲಾಗುತ್ತಿರುವುದನ್ನು ತಡೆಯಬಹುದು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ಧ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಮುಂದಿನ ದಿನಗಳಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಯ ವಿಷಯವು ಬೃಹತ್ ವೇದಿಕೆಗಳಲ್ಲಿ ವ್ಯಕ್ತವಾಗುವಂತೆ ಪ್ರಯತ್ನಿಸಲಾಗುವುದು. ಸರ್ವರ ಒಳಿತನ್ನು ಒಳಗೊಂಡ ಈ ಕಾರ್ಯಕ್ಕೆ ಆದಷ್ಟು ಬೇಗನೆ ಯಶಸ್ಸು ಲಭಿಸಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಳಿಕ ಢವಳಗಿಯ ಘನಮಠೇಶ್ವರ ಸ್ವಾಮೀಜಿ ಮಾತನಾಡಿದರು. ಸಾಹೇಬಗೌಡ ಕರಿಗೌಡರ, ಬಸವರಾಜ ಸಂಗಮ, ನೀಲಪ್ಪ ಅಂಗಡಿ, ಪ್ರಭಾಕರ ಖೇಡದ, ಅರವಿಂದ ಕವಲಗಿ, ಅಭಿಷೇಕ ಬಿರಾದಾರ, ಕಾಶೀನಾಥ ಅವಟಿ, ಸಂಗಯ್ಯ ಒಡೆಯರ, ಸಂಗು ಸಂಗಮ, ವಿಠಲ ಅಂಬನಳೂರ.‌ ಬಿಜ್ಜರಗಿ, ಬಾಬಾನಗರ, ವಡವಡಗಿ, ನಾಗರಾಳ, ಢವಳಗಿ, ಹೆಬ್ಬಾಳ, ಕೋಲಾರ, ಹಂಗರಗಿ ಸೇರಿದಂತೆ ವಿವಿಧ ಗ್ರಾಮಗಳ‌ ರೈತರು ಭಾಗವಹಿಸಿದ್ದರು.

ಪೋಟೋ: ಬಸವನಬಾಗೇವಾಡಿಯ ಮೂಲನಂದೀಶ್ವರ ದೇವಸ್ಥಾನದ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ನಂದಿ ಸತ್ಯಾಗ್ರಹದಲ್ಲಿ ಶನಿವಾರ ಅಂತರಾಷ್ಟ್ರೀಯ ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ ಮಾತನಾಡಿದರು.

ಕೋಟ್‌

ಜೋಡೆತ್ತಿನ ರೈತರಿಗೆ ₹11000 ಪ್ರೋತ್ಸಾಹ ಧನದ ಬೇಡಿಕೆಗೆ ವಿವಿಧ ಗ್ರಾಮಗಳ ಗುರು-ಶಿಷ್ಯರು ಒಂದಾಗಿ ಬೆಂಬಲ ನೀಡಿದಂತೆ, ರಾಜ್ಯದ ಎಲ್ಲ ಸ್ಥಳಗಳಲ್ಲಿರುವ ಗುರು-ಶಿಷ್ಯ ಬಳಗ ಒಂದಾಗಿ ಬೆಂಬಲ ನೀಡಿದರೆ ಕೇವಲ ಒಂದು ತಿಂಗಳಲ್ಲಿ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿದೆ.‌ ಬಸವನ ಬಾಗೇವಾಡಿಯ ನಂದಿ‌ ಸತ್ಯಾಗ್ರಹವು ರಾಜ್ಯದ‌ ಎಲ್ಲ ಗುರು-ಶಿಷ್ಯ‌ ಬಳಗಕ್ಕೆ ಮಾದರಿಯಾಗಿ ನಿಲ್ಲಲಿದೆ.‌ ಮುಂದಿನ ದಿನಗಳಲ್ಲಿ ಜೋಡೆತ್ತಿನ ಕೃಷಿ ಪುನಶ್ಚೇತನಕ್ಕಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಗುರು-ಶಿಷ್ಯರ ಸಮಾವೇಶ ಹಮ್ಮಿಕೊಳ್ಳುವ ಯೋಚನೆ ಇದೆ.

ಬಸವರಾಜ ಬಿರಾದಾರ, ನಂದಿ ಸತ್ಯಾಗ್ರಹದ ಆಯೋಜಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ