ಮುಂಡರಗಿ: ಪಟ್ಟಣದಲ್ಲೊಂದು ನಂದಿನಿ ಉತ್ಪನ್ನಗಳ ಮಳಿಗೆಗೆ ಅವಕಾಶ ನೀಡಿ ಜನತೆಗೆ ರುಚಿಕರ ಹಾಗೂ ಗುಣಮಟ್ಟದ ನಂದಿನಿ ಉತ್ಪನ್ನಗಳು ದೊರೆಯುವಂತೆ ಮಾಡಿ, ಜನತೆಗೆ ಅನುಕೂಲ ಮಾಡಿಕೊಟ್ಟಿರುವ ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಎಚ್.ಪಾಟೀಲರವರ ಕಾರ್ಯ ಎಲ್ಲರೂ ಮೆಚ್ಚುವಂತದ್ದು ಎಂದು ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣಕ್ಕೆ ಹೊಂದಿಕೊಂಡು ಶುಕ್ರವಾರ ಜರುಗಿದ ಕೆಎಂಎಫ್‌ನ ನಂದಿನಿ ಉತ್ಪನ್ನ ಮಳಿಗೆ ಉದ್ಘಾಟಿಸಿ ಮಾತನಾಡಿದರು. ರೈತರಿಂದ ಬರುವ ಹಾಲಿನಿಂದ ತಯಾರಾಗುವ ಎಲ್ಲ ನಂದಿನಿ ಉತ್ಪನ್ನಗಳು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಜನತೆ ಈ ಮಳಿಗೆಯ ಸದುಪಯೋಗ ಪಡೆದುಕೊಳ್ಳಬೇಕು. ಇದರ ನಿರ್ವಾಹಕರು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಕೆಎಂಎಫ್ ಮಂಡಳಿಗಳಲ್ಲಿ ಆಯಾ ವ್ಯಾಪ್ತಿ ಪ್ರದೇಶಕ್ಕೆ ತಕ್ಕಂತೆ ಸುಮರು 147ಕ್ಕೂ ಹೆಚ್ಚು ಉತ್ಪನ್ನಗಳು ತಯಾರಾಗುತ್ತಿದ್ದು, ಧಾರವಾಡ ಭಾಗದಲ್ಲಿ ಧಾರವಾಡ ಪೇಢಾ, ಬಿಳಿ ಪೇಢಾ, ಮೈಸೂರು ಭಾಗದಲ್ಲಿ ಮೈಸೂರು ಪಾಕು, ಬೆಲ್ಲದ ಸ್ವೀಟು, ಬೆಳಗಾವಿ ಭಾಗದಲ್ಲಿ ಕುಂದಾ ಹೀಗೆ ಆಯಾ ಪ್ರದೇಶಕ್ಕೆ ತಕ್ಕಂತೆ ಸ್ವೀಟ್ ಹಾಗೂ ಕಾರದ ಉತ್ಪನ್ನಗಳು ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ.
ಮುಂಡರಗಿಯಲ್ಲಿ ಪ್ರಾರಂಭವಾದ ನಂದಿನಿ ಉತ್ಪನ್ನ ಮಳಿಗೆಯ ಸಿಬ್ಬಂದಿಯವರು ಗ್ರಾಹಕರೊಂದಿಗೆ ಪ್ರೀತಿ, ವಿಶ್ವಾಸ, ಗೌರವದಿಂದ ನಡೆದುಕೊಂಡು ವ್ಯವಹರಿಸಬೇಕು. ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡು ಈ ಮಳಿಗೆ ನಿರ್ಮಾಣ ಮಾಡಲು ಶಾಸಕ ಡಾ. ಚಂದ್ರು ಲಮಾಣಿಯವರ ಸಹಕಾರವೂ ಇದೆ. ಕೆಎಂಎಫ್ ಗ್ರಾಹಕರ ಸ್ನೇಹಿಯಾಗಿ ಜನರಿಗೆ ಹತ್ತಿರವಾಗುತ್ತಿದೆ. ಕೆಎಂಎಫ್‌ನಿಂದ ವಿವಿಧ ಭಾಗದಲ್ಲಿ ಸಾರ್ವಜನಿಕರ ಹಿತಕ್ಕಾಗಿ, ಸೇವೆಗಾಗಿ ನಂದಿನಿ ಉತ್ಪನ್ನ ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಮುಂಡರಗಿಯಲ್ಲಿ ಇನ್ನೂ ಎರಡು ಸ್ಥಳಗಳಲ್ಲಿ ಇಂತಹದ್ದೇ ಮಳಿಗೆಯನ್ನು ತೆರೆಯಲು ಯೋಚಿಸಲಾಗುತ್ತಿದೆ. ಗ್ರಾಹಕರು ನಂದಿನಿ ಉತ್ಪನ್ನಗಳನ್ನುಹೆಚ್ಚು ಹೆಚ್ಚು ಬಳಕೆ ಮಾಡುವ ಮೂಲಕ ನಮ್ಮ ರೈತರಿಗೆ ನಮ್ಮಿಂದ ಅನುಕೂಲ ಮಾಡಿಕೊಡಬೇಕು ಎಂದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಲೂಕಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಬಸವರಾಜ ಅಮರಗೋಳ ಹಿರೇಮಠ, ಬಸವರಾಜ ಬಿಳಿಮಗ್ಗದ, ಕೆಎಂಎಫ್‌ನ ಡಾ. ರಾಕೇಶ ತಲ್ಲೂರ, ಡಾ. ಪ್ರಸನ್ನ ಪಟ್ಟೇದ, ತಿಪ್ಪಾರಡ್ಡಿ, ಚನ್ನಪ್ಪ ಮುರುಡಿ, ಸುಭಾಸ ಗುಡಿಮನಿ, ವೀರಣ್ಣ ತುಪ್ಪದ, ಆರ್.ಎಂ. ತಪ್ಪಡಿ, ದೇವು ಹಡಪದ, ಕುಮಾರ ಡೊಳ್ಳಿನ, ಪ್ರಭು ಕಾರಬಾರಿ, ಯಂಕಪ್ಪ ಸುಣಗಾರ, ಮಂಜಪ್ಪ ದಂಡಿನ, ಷಣ್ಮುಖ ಶಿರೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.