ಕನ್ನಡಪ್ರಭ ವಾರ್ತೆ ನಂಜನಗೂಡು
ಶನಿವಾರ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ 42ನೇ ರಾಷ್ಟ್ರ ಮಟ್ಟದ 65 ಜೊತೆ ಕಾಟಾ ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಸುತ್ತೂರು ಕುಮಾರ ಪ್ರಶಸ್ತಿಗಾಗಿ ನಡೆದ ಸೆಣಸಾಟದ ಪಂದ್ಯದಲ್ಲಿ ಮೈಸೂರು ಚಾಮುಂಡಿ ಕ್ರೀಡಾಂಗಣದ ಪೈ. ನಿತಿನ್ ಮತ್ತೋರ್ವ ಕುಸ್ತಿಪಟು ಮೈಸೂರಿನ ಭೂತಪ್ಪನವರ ಗರಡಿ ಪೈ. ದೀಕ್ಷಿತ್ ಅವರನ್ನು ಮಣಿಸಿ ಸುತ್ತೂರು ಕುಮಾರ ಪ್ರಶಸ್ತಿಯನ್ನು ಜಯಿಸಿದರು.ಉಳಿದಂತೆ ಮೈಸೂರು, ಚಾಮರಾಜನಗರ, ಹಾಸನ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 65 ಜೊತೆ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಸೆಣೆಸಾಟ ನಡೆಸಿದರು. ಎಲ್ಲರಿಗೂ ತಲಾ 5 ನಿಮಿಷಕ್ಕೆ ನಿಗದಿ ಮಾಡಿ ಕಣಕ್ಕೆ ಬಿಡಲಾಗಿತ್ತು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಿತು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಜನರ ಜೀವನ ಶೈಲಿ ಹಾಗೂ ಆಹಾರ ಸೇವನೆ ಕ್ರಮ ಬದಲಾಗಿದ್ದು, ಜೊತೆಗೆ ದೈಹಿಕ ಕಸರತ್ತಿನ ಆಟೋಟ ಚಟುವಟಿಕೆಗಳಿಂದಲೂ ದೂರಾಗಿರುವುದರಿಂದ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯ ಪೂರ್ಣ ಜೀವನಕ್ಕೆ ಮುಂದಾಗಬೇಕು ಎಂದರು.
ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಶಾಸಕರಾದ ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ಧರಾಮಯ್ಯ, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ವಿಶ್ರಾಂತ ಕುಲಪತಿ ಹೇಮಂತ್ ಕುಮಾರ್ ಭಾಗವಹಿಸಿದ್ದರು.