ರೈತರಿಗೆ ಘನತೆ ತಂದವರು ನಂಜುಂಡಸ್ವಾಮಿ: ಆಂಜನೇಯ ರೆಡ್ಡಿ

KannadaprabhaNewsNetwork |  
Published : Feb 14, 2024, 02:17 AM IST
ತುಮಕೂರು ವಿವಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮಂಗಳವಾರ ಆಯೋಜಿಸಿದ್ದ ‘ಪ್ರೊ.ಎಂ. ಡಿ. ನಂಜುಂಡಸ್ವಾಮಿ ಅವರ ರೈತ ಹೋರಾಟಗಳು: ಸಮಕಾಲೀನ ಸವಾಲುಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಆಂಜನೇಯರೆಡ್ಡಿ, ಪ್ರೊ. ಪ್ರಸನ್ನಕುಮಾರ್‌ಕೆ.,ಪ್ರೊ. ಜಯಶೀಲ, ಡಾ. ಮುನಿರಾಜುಎಂ.,ಪ್ರೊ. ರವೀಂದ್ರಕುಮಾರ್ ಬಿ., ಪ್ರೊ. ವಿಲಾಸ್ ಎಂ.ಕದ್ರೋಳ್ಕರ್, ಡಾ.ನೀಲಕಂಠಎನ್. ಟಿ. ಇದ್ದಾರೆ. | Kannada Prabha

ಸಾರಾಂಶ

ನಂಜುಂಡಸ್ವಾಮಿಯವರ ಹೋರಾಟಗಳಿಂದಾಗಿ 80-90 ರ ದಶಕದ ರಾಜಕೀಯ ಸನ್ನಿವೇಶಗಳು ಬದಲಾದವು. ರೈತರಿಗೆ ಸಂವಿಧಾನದ ಹಕ್ಕುಗಳನ್ನು ತಿಳಿಸಿ, ಸರ್ಕಾರ ಎಸಗುತ್ತಿದ್ದ ಅಮಾನವೀಯತೆಯ ವಿರುದ್ಧ ಹೋರಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕೃಷಿಕರ ಪರ ಹೋರಾಟಗಳಿಗಾಗಿ 80 ರ ದಶಕದಲ್ಲಿ ರೈತ ಸಂಘವನ್ನು ಸ್ಥಾಪಿಸಿ ರೈತರಿಗೆ ಘನತೆ ತಂದುಕೊಟ್ಟದ್ದು ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಎಂದು ಬಯಲುಸೀಮೆಯ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ಪ್ರೊ.ಎಂ. ಡಿ. ನಂಜುಂಡಸ್ವಾಮಿಯವರ ರೈತ ಹೋರಾಟಗಳು: ಸಮಕಾಲಿನ ಸವಾಲುಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಬೆಳೆಗೆ ಬೆಂಬಲ ಬೆಲೆ, ಕೃಷಿ ಸಾಲ ಮರುಪಾವತಿ, ನೀರಾವರಿ ಯೋಜನೆಗಳ ಅನುಷ್ಠಾನ, ಬೀಜ ವಿತರಣೆ ಕುರಿತ ಹಲವಾರು ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ರೈತರ ಧ್ವನಿಯಾಗಿ, ಮನುಷ್ಯನ ಮೂಲ ಬೇರಿರುವುದು ಕೃಷಿಯಲ್ಲಿ. ಜಾಗತಿಕವಾಗಿ ಯೋಚಿಸಬೇಕು, ಸ್ಥಳೀಯವಾಗಿ ಕಾರ್ಯನಿರ್ವಹಿಸಬೇಕು, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕು ಎಂದು ತಿಳಿಸಿದವರು ನಂಜುಂಡಸ್ವಾಮಿಯವರು ಎಂದರು.

ಸಾವಿರಾರು ಎಕರೆಯ ಭೂ ಒಡೆಯರಾಗಿದ್ದ ಕುಟುಂಬದಲ್ಲಿ ಜನಿಸಿ, ವಿದೇಶದಲ್ಲಿ ಕಾನೂನು ಶಿಕ್ಷಣ ಮುಗಿಸಿ, ಪಿಎಚ್‌ಡಿ ಮಾಡುವ ಸಂದರ್ಭದಲ್ಲಿ ವಿದೇಶದ ತಾತ್ವಿಕ ಪದ್ಧತಿಗಳನ್ನು ವಿರೋಧಿಸಿ, ಮರಳಿ ಭಾರತಕ್ಕೆ ಬಂದು ಮೈಸೂರಿನಲ್ಲಿ ಬೋಧನೆಯೊಂದಿಗೆ ಕೃಷಿಯಲ್ಲಿ ತೊಡಗಿದರು ನಂಜುಂಡಸ್ವಾಮಿಯವರು. ತಮ್ಮ ಸಮಕಾಲಿನರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು, ರೈತರನ್ನು ಸಂಘಟಿಸಿ, ಹೋರಾಟಗಳನ್ನು ಮಾಡಿದರು ಎಂದು ತಿಳಿಸಿದರು.

ನಂಜುಂಡಸ್ವಾಮಿಯವರ ಹೋರಾಟಗಳಿಂದಾಗಿ 80-90 ರ ದಶಕದ ರಾಜಕೀಯ ಸನ್ನಿವೇಶಗಳು ಬದಲಾದವು. ರೈತರಿಗೆ ಸಂವಿಧಾನದ ಹಕ್ಕುಗಳನ್ನು ತಿಳಿಸಿ, ಸರ್ಕಾರ ಎಸಗುತ್ತಿದ್ದ ಅಮಾನವೀಯತೆಯ ವಿರುದ್ಧ ಹೋರಾಡಿದರು. ಶಾಶ್ವತ ನೀರಾವರಿಗಾಗಿ ಸರ್ಕಾರದ ವಿರುದ್ಧ ಸೆಡ್ಡುಹೊಡೆದು 80 ರ ದಶಕದ ಗೋಲಿಬಾರ್‌ನಲ್ಲಿ 33.5 ಲಕ್ಷ ರೈತರೊಂದಿಗೆ ಶಕ್ತಿ ಪ್ರದರ್ಶನ ಮಾಡಿ ಬಂಧನಕ್ಕೊಳಗಾದರು ಎಂದು ತಿಳಿಸಿದರು.

ಪ್ರಸ್ತುತ ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ಲೂಟಿಯಾಗುತ್ತಿದೆ. ಬೀಜ ವಿತರಣೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ರೈತರು ಅವಲಂಬಿತರಾಗುತ್ತಿದ್ದಾರೆ. ರಾಸಾಯನಿಕ ಸಿಂಪಡಿಸಿ ಭೂಮಿಯ ಫಲವತ್ತತೆಯನ್ನು ನಾಶಮಾಡಿದ್ದೇವೆ. ನಾವು ಸೇವಿಸುವ ತರಕಾರಿಗಳಲ್ಲಿ ಭಾರಿ ಲೋಹದ ಅಂಶಗಳು ಪತ್ತೆಯಾಗುತ್ತಿವೆ. ಕುಡಿಯುವ ನೀರಿನಲ್ಲಿ ಯುರೇನಿಯಂ ಅಂಶ ಅಧಿಕವಾಗಿದೆ. ಇದರಿಂದಾಗಿ ಆರೋಗ್ಯದ ಸಮಸ್ಯೆ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತ ಸಂಘಗಳು ಸರ್ಕಾರದ ಮುಂದೆ ತಾತ್ಕಾಲಿಕ ಬೇಡಿಕೆಗಳನ್ನು ಇಡುತ್ತಿವೆ. ಅಧ್ಯಯನಶೀಲ, ಸಂಶೋಧನಾತ್ಮಕ ಬೇಡಿಕೆಗಳು ಇಲ್ಲವಾಗಿವೆ. ವೈಜ್ಞಾನಿಕ ದೃಷ್ಟಿಯಿಂದ ಸಮಸ್ಯೆಗಳನ್ನು ಅವಲೋಕಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್‌ ಕೆ., ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು ಎಂ., ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಪ್ರೊ. ಜಯಶೀಲ, ಪ್ರಾಧ್ಯಾಪಕ ಪ್ರೊ.ರವೀಂದ್ರಕುಮಾರ್ ಬಿ.,ರೈತ ಹೋರಾಟಗಾರ ಬಸವರಾಜು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಲ್ಲಿ ಸಚಿವ ಸ್ಥಾನಕ್ಕಾಗಿ ಹೆಚ್ಚಿದ ಕೂಗು!
ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ