ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲು ನಾಪೋಕ್ಲು- ವಿರಾಜಪೇಟೆ ಮುಖ್ಯರಸ್ತೆಯ ಹಳೆ ತಾಲೂಕು ಬಳಿ ರಸ್ತೆ ಹೊಂಡು ಗುಂಡಿಗಳಿಂದ ಮೃತ್ಯುಕೂಪವಾಗಿ ಪರಿಣಮಿಸಿದೆ. ಕೂಡಲೇ ರಸ್ತೆ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಟ್ಟಣಕ್ಕೆ ಸಮೀಪದ ಹಳೆ ತಾಲೂಕು ಬಳಿಯ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಪಕ್ಕದ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು ಹಲವು ದಿನಗಳಿಂದ ಮುಚ್ಚದೆ ಇದ್ದುದರಿಂದ ಸಣ್ಣ ಗುಂಡಿಗಳು ದೊಡ್ಡ ಗುಂಡಿಗಳಾಗಿ ರಸ್ತೆ ಸಂಚಾರಕ್ಕೆ ತೀವ್ರ ತೊಂದಯಾಗುತ್ತಿದೆ. ವಾಹನಗಳು ರಸ್ತೆಯ ಅವ್ಯವಸ್ಥೆಯಿಂದ ಮತ್ತೊಂದು ಕಡೆಯಲ್ಲಿ ಚಲಿಸುತ್ತಿವೆ. ಇದರಿಂದಾಗಿ ಅಲ್ಲಿನ ನೀರಿನ ಪೈಪಿಗೆ ತೊಂದರೆಯಾಗಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ದುಸ್ತರವಾಗಿ ಹೊಂಡಗಳ ಅರಿವಿಲ್ಲದೆ ಸವಾರರು ಬಿದ್ದು ಸಮಸ್ಯೆ ಅನುಭವಿಸಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ದೇವಾಲಯದ ಸಮಿತಿ ಸದಸ್ಯರು ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದರು. ಕಳೆದ ವರ್ಷವೂ ಇದೇ ಸ್ಥಳದಲ್ಲಿ ಗುಂಡಿಗಳಾಗಿ ಏರ್ಪಟ್ಟು ಸಮಸ್ಯೆಯಾಗಿತ್ತು. ಇದೀಗ ಮತ್ತೆ ರಸ್ತೆ ಹೊಂಡದಿಂದ ಕೂಡಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸುವರೇ ಎಂದು ಕಾದುನೋಡಬೇಕಾಗಿದೆ. ಜೀವ ಹಾನಿ ಆಗುವ ಮುನ್ನ ರಸ್ತೆ ದುರಸ್ತಿ ಪಡಿಸಲು ಗ್ರಾಮ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು- ಡಾ. ಸಣ್ಣುವಂಡ ಕಾವೇರಪ್ಪ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ