ಎಸ್.ಜಿ. ತೆಗ್ಗಿನಮನಿ
ಸರ್ಕಾರ ಜನರಿಗೆ ಅನುಕೂಲವಾಗಲೆಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಪ್ರಾರಂಭ ಮಾಡಿದೆ. ಆದರೆ ನರಗುಂದ ತಾಲೂಕು ಆಸ್ಪತ್ರೆಯಲ್ಲಿರುವ ಜನ ಔಷಧಿ ಕೇಂದ್ರ 1 ತಿಂಗಳಿಂದ ಬಂದ್ ಆಗಿದ್ದರಿಂದ ಬಡ ರೋಗಿಗಳಗೆ ತೀವ್ರ ತೊಂದರೆಯಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಸಿಗಲಾರದ ಔಷಧಿಗಳನ್ನು ಆಸ್ಪತ್ರೆಗೆ ಬರುವ ರೋಗಿಗಳು ಈ ಜನ ಔಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದರು. ಆದರೆ ಕಳೆದ 1 ತಿಂಗಳಿನಿಂದ ಈ ಔಷಧಿ ಕೇಂದ್ರ ಬಂದ್ ಆಗಿದ್ದರಿಂದ ಹೆಚ್ಚಿನ ಹಣ ನೀಡಿ ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿ ಮಾಡುವ ಸ್ಥಿತಿ ಬಂದಿದೆ ಎಂದು ರೋಗಿಗಳು ಹೇಳುತ್ತಾರೆ.ಈ ಔಷಧಿ ಕೇಂದ್ರ ಸಿದ್ದಯ್ಯ ಹಿರೇಮಠ ಎನ್ನುವರು ನಡೆಸುತ್ತಿದ್ದರು. ಅವರಿಗೆ ಸರ್ಕಾರಿ ನೌಕರಿ ಬಂದಿದ್ದರಿಂದ ಅವರು ಕೈ ಬಿಟ್ಟಿದ್ದಾರೆ. ಅಂದಿನಿಂದ ಬಂದ್ ಆಗಿದೆ. ಈ ಜನ ಔಷಧಿ ಕೇಂದ್ರ ನಡೆಸಲು ರವಿ ಮೇಟಿ ಎಂಬುವರು ಪರವಾನಗಿ ಪಡೆದುಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ಕೂಡ ಇನ್ನು ಅಧಿಕಾರಿಗಳಿಂದ ಪರವಾನಗಿ ಸಿಕ್ಕಿಲ್ಲವೆಂದು ತಿಳಿದು ಬಂದಿದೆ.
ಕಳೆದೊಂದು ತಿಂಗಳಿಂದ ತಾಲೂಕಾ ಆಸ್ಪತ್ರೆಯಲ್ಲಿ ಸಿಗದ ಕೆಲವು ಔಷಧಿಗಳನ್ನು ರೋಗಿಗಳು ಹೆಚ್ಚಿನ ಹಣ ನೀಡಿ ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿಸುವ ಸ್ಥಿತಿ ಬಂದಿದೆ.ಭಾರತೀಯ ಜನ ಔಷಧಿ ಕೇಂದ್ರ ನಡೆಸುವ ಹಿರೇಮಠಗೆ ಸರ್ಕಾರಿ ನೌಕರಿ ಬಂದಿದ್ದರಿಂದ ಕೇಂದ್ರ ಬಂದ್ ಆಗಿದೆ. ಈ ಕೇಂದ್ರ ನಡೆಸಲು ಮೇಟಿ ಎನ್ನುವರು ಪರವಾನಗಿ ಪಡೆದುಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ರಾಜೇಶ ಟಿ.ಎಸ್. ಹೇಳುತ್ತಾರೆ.
ಪ್ರತಿ ದಿವಸ ಆಸ್ಪತ್ರೆಗೆ ಬರುವ ರೋಗಿಗಳಿಗೆ ಈ ಭಾರತೀಯ ಜನ ಔಷಧಿ ಕೇಂದ್ರ ಬಂದ್ ಆಗಿದ್ದರಿಂದ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಬೇಗ ಅರ್ಜಿ ಸಲ್ಲಿಸಿದವರಿಗೆ ಪರವಾನಗಿ ನೀಡಿ ಈ ಜನ ಔಷಧಿ ಕೇಂದ್ರ ಪ್ರಾರಂಭಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಹೇಳುತ್ತಾರೆ.