ಎಸ್.ಜಿ. ತೆಗ್ಗಿನಮನಿ
ನರಗುಂದ: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ನರಗುಂದ ಪುರಸಭೆ ಈ ಬಾರಿ ಗಮನ ಸೆಳೆದಿದ್ದು, ನರಗುಂದ ಪಟ್ಟಣ ರಾಜ್ಯದಲ್ಲಿ 10ನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.ಕೇಂದ್ರ ಸರ್ಕಾರ 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ನರಗುಂದ ಪಟ್ಟಣ ರಾಜ್ಯದ 129 ಪುರಸಭೆಗಳಲ್ಲಿ 10ನೇ ಸ್ಥಾನ ಗಳಿಸಿದೆ. ದೇಶಾದ್ಯಂತ ಒಟ್ಟು 4,500 ನಗರಗಳಲ್ಲಿ ಸಮೀಕ್ಷೆ ನಡೆದಿದೆ. ಈ ಪೈಕಿ ನರಗುಂದ ಪಟ್ಟಣ ಪ್ರತಿ ದಿನ ಮನೆ ಮನೆಯ ಕಸ ಸಂಗ್ರಹಣೆ ಮಾಡುತ್ತಿದೆ. ಮೂಲದಲ್ಲಿಯೇ ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದೆ.ಪ್ರತ್ಯೇಕ ಸಂಗ್ರಹಣೆ: ಪ್ರತಿ ದಿನ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 14 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಅದರಲ್ಲಿ 6 ಟನ್ ಒಣಕಸ ಮತ್ತು 6 ಟನ್ ಹಸಿಕಸ, ಇದಲ್ಲದೆ ಮನೆಯಿಂದ ಉತ್ಪಾದನೆಯಾಗುವ ಇತರ ಅಪಾಯಕಾರಿ ತ್ಯಾಜ್ಯ ಸಹ ಪ್ರತ್ಯೇಕವಾಗಿ ಸಂಗ್ರಹಣೆ ಮಾಡಲಾಗುತ್ತಿದೆ. ಸಂಗ್ರಹಣೆ ಮಾಡಲಾದ ಕಸವನ್ನು ಸವದತ್ತಿ ರಸ್ತೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಲಾಗುತ್ತಿದೆ. ಪುರಸಭೆಯ 9 ಎಕರೆ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವಿದೆ. ಪ್ರತಿ ದಿನ ಸಂಗ್ರಹಣೆಯಾಗುವ ಹಸಿ ಕಸವನ್ನು ಎರೆಹುಳು ಗೊಬ್ಬರ ಹಾಗೂ ಬಯೋಗ್ಯಾಸ್ ತಯಾರಿಗೆ ಬಳಸಲಾಗುತ್ತಿದೆ. ಇನ್ನುಳಿದ ಕಸವನ್ನು ವಿಂಡೋ ಪ್ಲಾಟ್‌ಫಾರಂ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ.
ಗೊಬ್ಬರಕ್ಕೆ ಬೇಡಿಕೆ: ಎರೆಹುಳು ಗೊಬ್ಬರ ಮತ್ತು ಎರೆಜಲಕ್ಕೆ ತುಂಬಾ ಬೇಡಿಕೆ ಇದೆ. ಎರೆಹುಳು ಗೊಬ್ಬರವನ್ನು ಪ್ರತಿ ಕೆಜಿಗೆ ₹10ರಂತೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಒಣಕಸದಲ್ಲಿ ಲಭ್ಯವಿರುವ ಪುನರ್ಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಬಾಟಲ್, ರಟ್ಟು, ತಗಡು, ಚಪ್ಪಲಿಗಳು, ಟೈರ್, ಟೆಟ್ರಾ ಪ್ಯಾಕ್ ಇನ್ನು ಹಲವಾರು ವಸ್ತುಗಳನ್ನು ಪ್ರತ್ಯೇಕಿಸಿ ಬೇಲಿಂಗ್ ಮಶಿನ್ ಮೂಲಕ ಬೇಲ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ತಿಂಗಳು ಗೊಬ್ಬರ ಮತ್ತು ಪುನರ್ಬಳಕೆ ವಸ್ತುಗಳಿಂದ ಪುರಸಭೆಗೆ ₹70 ಸಾವಿರ ವರೆಗೂ ಆದಾಯ ಬರುತ್ತಿದೆ.ನರಗುಂದ ಪುರಸಭೆ ಉತ್ತಮ: ಸ್ವಚ್ಛತೆಯಲ್ಲಿ ರಾಜ್ಯಕ್ಕೆ ನರಗುಂದ 10ನೇ ಸ್ಥಾನ, ಗಜೇಂದ್ರಗಡ 57, ಮುಂಡರಗಿ 79, ರೋಣ 85, ಲಕ್ಷ್ಮೇಶ್ವರ 89, ಶಿರಹಟ್ಟಿ 129, ಮುಳಗುಂದ 140, ಗದಗ-ಬೆಟಗೇರಿ 149, ನರೇಗಲ್ಲ 167ನೇ ಸ್ಥಾನಗಳನ್ನು ಪಡೆದಿವೆ.
ಪ್ರಗತಿ ಸಾಧಿಸುತ್ತೇವೆ: ಸ್ವಚ್ಛ ಭಾರತ ಅಭಿಯಾನದ ನಿಜವಾದ ಯಶಸ್ಸು ಪಟ್ಟಣಗಳಲ್ಲಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಲ್ಲಿದೆ. ಈ ದಿಸೆಯಲ್ಲಿ ನರಗುಂದ ಸಫಲತೆಯ ಹೆಜ್ಜೆ ಇಟ್ಟಿದೆ. ಮುಂದಿನ ದಿನಗಳಲ್ಲಿ ಗದಗ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತೇವೆ ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನೆ ನಿರ್ದೇಶಕ ಬಸವರಾಜ ಕೊಟ್ಟರ ಹೇಳಿದರು.ಇದಕ್ಕೆ ಕಾರಣೀಭೂತರಾದ ನಮ್ಮ ಎಲ್ಲ ಸ್ವಚ್ಛತಾ ಸಿಬ್ಬಂದಿ, ವಾಹನ ಚಾಲಕರು, ಪುರಸಭೆಯ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಮೇಲಾಗಿ ಸ್ಥಳೀಯ ಶಾಸಕರ ಪ್ರೋತ್ಸಾಹವಿದೆ. ಸಾರ್ವಜನಿಕರ ಸಹಕಾರ ಅತ್ಯಗತ್ಯ. ಭವಿಷ್ಯದಲ್ಲಿ ನರಗುಂದ ಪುರಸಭೆಯನ್ನು ಸ್ವಚ್ಛತೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಹೇಳಿದರು.