ಕನ್ನಡಪ್ರಭ ವಾರ್ತೆ ಮಡಿಕೇರಿ ವಿರಾಜಪೇಟೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಭಾರತ ದೇಶ ಚಂದ್ರಯಾನ ಉಡಾವಣೆ ಮಾಡಿ ಯಶಸ್ಸುಗಳಿಸಿದೆ. ವಿಶ್ವದ ಜಿಡಿಪಿಯಲ್ಲಿ 10 ರೊಳಗಿನ ಸ್ಥಾನ ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ವಾಸಕ್ಕೆ ಯೋಗ್ಯವಾದ ನಿವೇಶನ, ಮನೆ, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕ ಹೊಂದದೆ ಇರುವ ಎಷ್ಟೋ ಕಡುಬಡ ಕುಟುಂಬಗಳಿದ್ದು, ಭಾರತ ವಿಕಾಸ ಹೊಂದಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಅವಲೋಕನ ಮಾಡಬೇಕಿದೆ ಎಂದರು.
ಆದಿವಾಸಿ ಜನರಿಗೆ ಬೇಕಿರುವ ನಿವೇಶನ, ಮನೆ, ದೀಪ, ಹತ್ತಿರದಲ್ಲಿ ಅಂಗನವಾಡಿ, ಶಾಲೆ, ಇಂತಹ ಕನಿಷ್ಠ ಮೂಲ ಸೌಲಭ್ಯ ಇಲ್ಲದಿರುವುದು ನಮ್ಮ ವ್ಯವಸ್ಥೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮವಲೋಕನ ಮಾಡಬೇಕಿದೆ ಎಂದು ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಎಲ್.ನಾರಾಯಣಸ್ವಾಮಿ ನೋವಿನಿಂದ ನುಡಿದರು.ಬಾಳುಗೋಡು ಯರವ ಹಾಡಿಯ ಜನರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು. ಸರ್ಕಾರದ ವ್ಯವಸ್ಥೆಯಲ್ಲಿರುವವರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುತ್ತಿದೆ. ಆದರೆ ಇಂತಹ ವಸತಿರಹಿತ ನಿರ್ಗತಿಕ ಕುಟುಂಬಗಳಿಗೆ ಸೌಲಭ್ಯ ಇಲ್ಲದಿರುವುದು ಬೇಸರ ತರಿಸುತ್ತದೆ. ಒಂದು ಪೈಸೆಯೂ ಸಹ ಅವರ ಜೇಬಿನಲ್ಲಿ ಇರುವುದಿಲ್ಲ. ಇಂತಹ ನಿರ್ಗತಿಕರಿಗೆ ಸೌಲಭ್ಯ ಕಲ್ಪಿಸುವುದು ಪ್ರಥಮ ಆದ್ಯತೆ ಆಗಬೇಕು ಎಂದರು.
ದೇಶ, ರಾಜ್ಯ, ಸಮಾಜ ಬೆಳೆಯುತ್ತಿದೆ ಎಂದು ಹೇಳುತ್ತೇವೆ. ಆದರೆ ಇಂತಹ ಜನರನ್ನು ಯಾರೂ ಸಹ ಗುರುತಿಸುವುದಿಲ್ಲ. ಇಂತಹ ನಿರ್ಗತಿಕರನ್ನು ಗುರುತಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂಬ ಮನೋಭಾವ ಯಾರಿಗೂ ಇಲ್ಲದಿರುವುದು ಸಮಾಜದ ಕನ್ನಡಿಯಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಯಾರೂ ಯಾರನ್ನು ಸಹ ಶೋಷಣೆ ಮಾಡಬಾರದು. ಆದರೆ ಇಂತಹ ಹಾಡಿಗಳನ್ನು ಗಮನಿಸಿದಾಗ ಶೋಷಣೆ ಯಾವ ರೀತಿ ಆಗಿದೆ ಎಂಬುದು ತಿಳಿಯುತ್ತದೆ ಎಂದರು.
ಇದೇ ಸಂದರ್ಭ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು. ಆರ್ಜಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯ ಆಗಾರವಾಗಿದ್ದು, ಇಲ್ಲಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಮತ್ತೊಬ್ಬರು ಅಪಘಾತದಲ್ಲಿ ಕುಟುಂಬದವರು ಮೃತಪಟ್ಟಿದ್ದು, ಯಾವುದೇ ಪರಿಹಾರ ದೊರಕಿಲ್ಲ ಎಂದು ಅವಲತ್ತುಕೊಂಡರು. ಈ ಸಂಬಂಧ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಅಹವಾಲು ಸ್ವೀಕರಿಸುವುದಕ್ಕೂ ಮೊದಲು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರ ಜೊತೆ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಬಾಳುಗೋಡು ಯರವ ಹಾಡಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದರು.