ಬಿ.ಸಿ.ರೋಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ

KannadaprabhaNewsNetwork |  
Published : Aug 31, 2026, 03:00 AM IST
ಬಿ.ಸಿ.ರೋಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ | Kannada Prabha

ಸಾರಾಂಶ

ಬಿ.ಸಿ.ರೋಡಿನ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಲೋಕಾರ್ಪಣೆ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆ ಅಂಗವಾಗಿ ಗುರುಪೂಜೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಲೋಕಾರ್ಪಣೆ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆ ಅಂಗವಾಗಿ ಗುರುಪೂಜೋತ್ಸವ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.

ಬೆಳಗ್ಗೆ 11 ಗಂಟೆಗೆ ನಡೆದ ವೃತ್ತದ ಲೋಕಾರ್ಪಣೆಯನ್ನು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ನೆರವೇರಿಸಿದರು.

ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ‘ಮೌನ ಕ್ರಾಂತಿಯ ಮೂಲಕ ಸಮಾಜಕ್ಕೆ ಬೆಳಕಾದ ಶ್ರೇಷ್ಠ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶ ಹಾಗೂ ತತ್ವಗಳನ್ನು ಪಾಲಿಸುವುದು ಇಂದಿನ ಅಗತ್ಯ’ ಎಂದರು. ಹಿಂದೂ ಸಮಾಜ ದಿಕ್ಕುತಪ್ಪಿದ ಸಮಯದಲ್ಲಿ ದಾರಿ ತೋರಿಸಿದವರು ಗುರುಗಳು, ಸನಾತನ ಧರ್ಮಕ್ಕೆ ಗೌರವ ಬಂದದ್ದೇ ದಾರ್ಶನಿಕರ ಚಿಂತನೆಯ ಫಲದಿಂದ, ಭಾರತದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜಗತ್ತಿನ ಯಾವ ಶಕ್ತಿಗೂ ತಡೆಯಲು ಸಾಧ್ಯವಿಲ್ಲ, ವಿಕಸಿತ ಭಾರತದ ಕಲ್ಪನೆ ಕೂಡ ಗುರುಗಳ ಸಂದೇಶವೇ ಆಗಿದೆ, ಸರ್ವರಿಗೂ ಶಿಕ್ಷಣ, ಆರ್ಥಿಕ ಸ್ವಾವಲಂಬನೆಯೇ ಮುಖ್ಯ ಉದ್ದೇಶ, ಗುರುಗಳ ಚಿಂತನೆಯಂತೆ ಸತ್ಯ, ಧರ್ಮ, ನ್ಯಾಯದಲ್ಲಿ ಜನರ ಸೇವೆ ಮಾಡುತ್ತೇನೆ ಎಂದು ಕ್ಯಾ.ಚೌಟ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಮಾತನಾಡಿ, ಸುಂದರವಾಗಿ ನಿರ್ಮಿಸಲಾಗಿರುವ ವೃತ್ತದ ಅದ್ದೂರಿ ಲೋಕಾರ್ಪಣೆ ಕಾರ್ಯಕ್ರಮ ಜನಸಾಗರದ ಮಧ್ಯೆ ಗಣ್ಯರ ಉಪಸ್ಥಿತಿಯಲ್ಲಿ ನಡೆದಿರುವುದು ಸಂತಸ ತಂದಿದೆ ಎಂದರು.

ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಶುಭ ಹಾರೈಸಿದರು.ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ‘ಬ್ರಹ್ಮಶ್ರೀ ನಾರಾಯಣಗುರುಗಳು ದಾರ್ಶನಿಕರಷ್ಟೇ ಅಲ್ಲದೆ ಪೂಜನೀಯರೂ ಆಗಿದ್ದಾರೆ. ಅವರ ಮಹತ್ವವನ್ನು ಮಹಾತ್ಮ ಗಾಂಧೀಜಿ ಹಾಗೂ ಪೋಪ್ ಸೇರಿದಂತೆ ವಿಶ್ವದ ಹಲವು ಗಣ್ಯರು ಉಲ್ಲೇಖಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನದ ಬದುಕು ಕಲ್ಪಿಸಲು ಅವರು ಶ್ರಮಿಸಿದ್ದರು’ ಎಂದರು.ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಜೀಪಮೂಡದ ಜ್ಞಾನಮಂದಿರದಲ್ಲಿ ಮನವಿ ಮಾಡಿದ್ದನ್ನು ಸ್ಮರಿಸಿದ ಅವರು, ಶಿವಗಿರಿ ಮಠದ ಶಾಖಾ ಮಠವೊಂದು ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ವಿದ್ಯೆಯ ಮಹತ್ವವನ್ನು ಅರಿತು ಉತ್ತಮ ಸಾಧನೆ ಮಾಡಬೇಕು ಎಂದರು.

ಸಂಘದ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನದ ಮೌಲ್ಯವನ್ನು ತೋರಿಸಿಕೊಟ್ಟ ನಾರಾಯಣ ಗುರುಗಳು, ಎಲ್ಲರೂ ಜಾತಿ ಮತ ಧರ್ಮವನ್ನು ಬಿಟ್ಟು ಹಿಂದೂಗಳಾಗಿ ಬದುಕೋಣ ಎಂದು ಸಂದೇಶ ಸಾರಿದವರು, ನಮಗೆ ಈ ದೇಶವೇ ಮೊದಲು, ಧರ್ಮ ಜಾಗೃತಿ ದೇಶ ಜಾಗೃತಿಯೊಂದಿಗೆ ದೇಶಕ್ಕಾಗಿ ನಮ್ಮದೇ ಆದ ಕೊಡುಗೆ ಕೊಟ್ಟು ಗುರುಗಳ ಸಂದೇಶವನ್ನು ಸಕಾರ ಮಾಡೋಣ ಎಂದು ಹೇಳಿದರು.

ಪ್ರೇಮನಾಥ ಕರ್ಕೇರ ವಿದ್ಯಾರ್ಥಿವೇತನ ಪುರಸ್ಕೃತರ ಪಟ್ಟಿಯನ್ನು ವಾಚಿಸಿದರು. ಉಪಾಧ್ಯಕ್ಷ ಜಯಪ್ರಕಾಶ್ ಜೆ. ಎಸ್. ಜಕ್ರಿಬೆಟ್ಟು ಸ್ವಾಗತಿಸಿದರು. ಇಂಜಿನಿಯರ್ ಸುಜಯ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ವೃತ್ತದ ನಿರ್ವಹಣೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ವಹಿಸಲಿದೆ.

ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜೊತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು, ಕೋಶಾಧಿಕಾರಿ ಸುನೀಲ್ ಎಸ್. ಕುಂದರ್ ಮೊಡಂಕಾಪು, ಲೆಕ್ಕಪರಿಶೋಧಕ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ, ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ ಹಾಗೂ ಯುವವಾಹಿನಿ ಅಧ್ಯಕ್ಷ ಕಿರಣ್ ಪೂಂಜರಕೋಡಿ ಉಪಸ್ಥಿತರಿದ್ದರು.ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ವಂದಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ 7ರಿಂದ 8.30ರವರೆಗೆ ಗುರುಮಂದಿರದಲ್ಲಿ ಭಜನಾ ಕಾರ್ಯಕ್ರಮ, ಗುರುಪೂಜೆ ಹಾಗೂ ಮಹಾಪೂಜೆ ನಡೆಯಿತು. ಬಳಿಕ ನಾರಾಯಣಗುರು ವೃತ್ತ ಲೋಕಾರ್ಪಣೆ, ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಬಳಿಕ ‘ದೇಯಿ ಬೈದೇತಿ’ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ
ಅಪಸ್ಮಾರ ಶಾಪವಲ್ಲ, ಗುಣಪಡಿಸಲಾಗುವ ಖಾಯಿಲೆ: ಡಾ.ನಿಹಾಲ್ ಅಹಮದ್