ಚಿಕ್ಕಬಳ್ಳಾಪುರ: ಭಕ್ತ ಕನಕ ದಾಸರು ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಆಶಯದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುರುಬರು ಸಂಘಟಿತರಾಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಗಂಗರೆ ಕಾಲುವೆ ನಾರಾಯಣಸ್ವಾಮಿ ಕರೆ ನೀಡಿದರು.
ನಗರದಲ್ಲಿ ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಹಾಗೂ ಕುರುಬ ಸಂಘದ ಕಚೇರಿಯಲ್ಲಿ ನಡೆದ ತಾಲೂಕು ಕುರುಬರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದಾರ್ಶನಿಕರನ್ನು ಒಂದು ಜಾತಿ, ಒಂದು ಪಕ್ಷಕ್ಕೆ ಸೀಮಿತಗೊಳಿಸುತ್ತಿರುವುದು ವಿಷಾದದ ಸಂಗತಿ. ತುಳಿತಕ್ಕೊಳಗಾದ ಸಮಾಜಗಳಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಜಾಗೃತಿ ಮೂಡಿಸಬೇಕಾಗಿದೆ. ಇಂತಹ ಜಾಗೃತಿಗಾಗಿ ನಾವು ದಾರ್ಶನಿಕರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಸ್ಥಾನಮಾನಗಳ ಬಗ್ಗೆ ನಾವು ಸಹ ಕೂಲಂಕುಷವಾಗಿ ಚರ್ಚಿಸಿ, ಜಾಗೃತರಾಗಬೇಕು ಎಂದರು.ನೂತನ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದಲ್ಲಿ 5 ಅಂತಸ್ತಿನ ಭವ್ಯವಾದ ಕುರುಬ ಜನಾಂಗದ ವಿದ್ಯಾರ್ಥಿ ನಿಲಯ ಅತಿ ಶೀಘ್ರದಲ್ಲಿಯೇ ಆರಂಭಗೊಳಿಸಲಾಗುವುದು. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಮೂರು ಲಕ್ಷ ಕುರುಬ ಸಮುದಾಯದವರಿದ್ದು, ಮಹಿಳೆಯರನ್ನು ಒಳಗೊಂಡಂತೆ. ನಾಡು, ನುಡಿಗಾಗಿ ಶ್ರಮಿಸಿದ ದಾರ್ಶನಿಕರು, ಆಚಾರ ವಿಚಾರಗಳು ಸಮುದಾಯದ ಪ್ರತಿಯೊಬ್ಬರಿಗೂ ತಲುಪಿದಾಗ ಸಮಾಜದಲ್ಲಿ ಜಾಗ್ರತೆಯಾಗಲಿದೆ. ಎಲ್ಲರೂ ಸೇರಿಕೊಂಡು ಶೀಘ್ರದಲ್ಲಿಯೇ ಬೃಹತ್ ಸಮಾವೇಶ ನಡೆಸಲು ಎಲ್ಲಾ ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿ ಎಲೆಮರಿಸ್ವಾಮಿ, ಉಪಾಧ್ಯಕ್ಷರಾಗಿ ವೆಂಕಟರಮಣಪ್ಪ, ಖಜಾಂಚಿ ಗೋಪಿ ಅವಿರೋಧವಾಗಿ ಆಯ್ಕೆಯಾದರು.ಕುರುಬ ಸಮುದಾಯದ ಮುಖಂಡರಾದ ಡಾ. ಚಂದ್ರಶೇಖರ್, ಕೆಂಪರಾಜು, ಹೆಲ್ಮೆಟ್ ರಾಮಣ್ಣ, ಬೇಕರಿ ಮಂಜುನಾಥ್, ಸುಮಿತ್ರ ನಾರಾಯಣಸ್ವಾಮಿ, ನಗರಸಭೆ ಮಾಜಿ ಉಪಾಧ್ಯಕ್ಷ ಸಿ.ಪಿ. ನಾರಾಯಣಸ್ವಾಮಿ, ನರೇಂದ್ರ ಕುಮಾರ್ ಬಾಬು, ಕಾಶೀನಾಥ್, ಮತ್ತಿತರರು ಇದ್ದರು.