ಕೊಪ್ಪಳ: ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವುದೇ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ತೋರಿಸುವ ನಿಜವಾದ ಗೌರವ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ 28 ಪ್ರಕರಣಗಳು ದಾಖಲಾಗಿದ್ದು, 33 ಆರೋಪಿಗಳನ್ನು ಬಂಧಿಸಲಾಗಿದೆ. ₹3 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಣ್ತಪ್ಪಿಸಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ತಾಲೂಕು ಎಸ್‌ಸಿ ಅಧ್ಯಕ್ಷ ಸುರೇಶ ದದಗಲ್ ಮಾತನಾಡಿ, ಜಾಗತೀಕರಣದಿಂದ ಎದುರಾಗಿರುವ ಹಲವು ಸಮಸ್ಯೆಗಳಿಗೆ ಗಾಂಧೀಜಿ ಚಿಂತನೆಯಲ್ಲಿ ಪರಿಹಾರಗಳಿವೆ ಎಂದರು.ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯೆಪ್ಪ ಹಿಟ್ನಾಳ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದರು. ಕೃಷಿ ಆಧಾರಿತ ವ್ಯವಸ್ಥೆ ಬಲಪಡಿಸಿದರೆ ದೇಶ ಪ್ರಗತಿ ಸಾಧಿಸಲಿದೆ ಎಂದರು.
ಗಾಂಧೀಜಿ, ಶಾಸ್ತ್ರಿ ಉನ್ನತ ವಿಚಾರ ಅಳವಡಿಸಿಕೊಳ್ಳಿ: ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಸರಳತೆ ಹಾಗೂ ಉನ್ನತ ವಿಚಾರಗಳನ್ನು ಪ್ರತಿಯೊಬ್ಬರು, ಅದರಲ್ಲೂ ವಿಶೇಷವಾಗಿ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುನಿರಾಬಾದ್ ಪಿ. ಲಿಂಗಯ್ಯ ಶಾಲೆಯ ಅಧ್ಯಕ್ಷ ಪಿ. ಸಾಂಬಶಿವ ರಾವ್ ಹೇಳಿದರು.ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ದಿನಾಚರಣೆ ನಿಮಿತ್ತ ಪಿ. ಲಿಂಗಯ್ಯ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಹಾಗೂ ಶಾಸ್ತ್ರೀಜಿ, ದೇಶವು ಕಂಡ ಇಬ್ಬರು ಮಹಾನ್ ವ್ಯಕ್ತಿಗಳು, ಅವರು ಅತ್ಯುನ್ನತ ವಿದ್ಯಾಭ್ಯಾಸ ಪಡೆದರು. ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದರು. ಇಬ್ಬರ ಸರಳತೆಗೆ, ಸ್ವಾರ್ಥವಿಲ್ಲದ ಬದುಕಿಗೆ ಹೆಸರುವಾಸಿಯಾಗಿದ್ದರು. ಇಬ್ಬರು ದೇಶದ ಬಗ್ಗೆ ಉನ್ನತ ವಿಚಾರಗಳನ್ನು ಹೊಂದಿದ್ದರು. ಇಬ್ಬರ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಶಾಲೆಯ ಮುಖ್ಯ ಶಿಕ್ಷಕ ಸೆಲ್ವ ಜಾರ್ಜ್, ಆಡಳಿತ ಅಧಿಕಾರಿ ಶ್ರೀನಿವಾಸ ಆಚಾರ್, ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.