)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾದಕ ವಸ್ತು ಮಾರಾಟ ಜಾಲದ ಮೇಲೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಆರ್‌ಎಂಸಿ ಯಾರ್ಡ್, ಸುಬ್ರಮಣ್ಯ ನಗರ, ಮಡಿವಾಳ, ರಾಜಾಜಿನಗರ, ವೈಟ್‌ಫೀಲ್ಡ್, ತಿಲಕನಗರ, ಯಶವಂತಪುರ ಹಾಗೂ ಇಂದಿರಾನಗರದ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ 10.306 ಕೆಜಿ ಎಂಡಿಎಂಎ, 127.302 ಕೆಜಿ ಗಾಂಜಾ, 3.314 ಕೆಜಿ ಹಾಗೂ ಹೈಡ್ರೋ ಗಾಂಜಾ ಸೇರಿದಂತೆ 12.85 ಕೋಟಿ ರು ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಈ ಡ್ರಗ್ಸ್‌ಗೆ 25.23 ಕೋಟಿ ರು ಬೆಲೆ ಇದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.ಈ ಪೆಡ್ಲರ್‌ಗಳ ಪೈಕಿ ಮೂವರು ವಿದೇಶಿಯರು, 6 ಮಂದಿ ಸ್ಥಳೀಯರು ಹಾಗೂ 8 ಮಂದಿ ಹೊರ ರಾಜ್ಯದವರು ಸೇರಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ ಡ್ರಗ್ಸ್ ದಂಧೆಕೋರರಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆಗೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ಸಿಸಿಬಿ ಬೃಹತ್ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ನಾಲ್ವರನ್ನು ಸೆರೆ ಹಿಡಿದು 23 ಕೋಟಿ ರು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ನೈಜೀರಿಯಾ ದೇಶದ ಅಂಬೊಮೊ ಜೊನ್ ವಿಕ್ಟರ್ ಅಲಿಯಾಸ್ ವಿಸ್ಡಂ, ಚಿಮೆ ನಾಡುಬುಸಿ ಮೋಸೆಸ್, ಕರಿಕಾರಿ ಅಮೋಸ್ ಹಾಗೂ ಕೇರಳ ರಾಜ್ಯ ಫಾರೂಕ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬ ಪೆಡ್ಲರ್ ಪ್ಯಾರಿಸ್ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದೆ. ಈ ಆರೋಪಿಗಳಿಂದ 10.270 ಕೆಜಿ ಎಂಡಿಎಂಎ ಹಾಗೂ 2.44 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ಪೆಡ್ಲರ್‌ಗಳ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಡಿಸಿಪಿ ರಾಜ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಮಾದಕ ವಸ್ತು ನಿಗ್ರಹ ದಳದ ಎಸಿಪಿ ಎಲ್.ವೈ.ರಾಜೇಶ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಪ್ರವೀಣ್.ಸಿ.ಯಲಿಗಾರ್, ಸಿ.ಎ.ಮಂಜಪ್ಪ ಹಾಗೂ ಪಿಎಸ್‌ಐ ಕೇಶವಮೂರ್ತಿ ತಂಡವು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಸನಪುರದ ಬಸವೇಶ್ವರ ಲೇಔಟ್‌ನಲ್ಲಿ ನೈಜೀರಿಯಾ ಮೂಲದ ಮೂವರು ಪೆಡ್ಲರ್‌ಗಳು ನೆಲೆಸಿದ್ದರು. ಹೊರ ರಾಜ್ಯದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿದಾಗ 10 ಕೆಜಿ ಎಡಿಎಂಎ ಪತ್ತೆಯಾಗಿದೆ. ಅದೇ ರೀತಿ ಆರು ತಿಂಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ ಕೇರಳ ಫಾರೂಕ್, ತನ್ನ ಸ್ನೇಹಿತನ ಜತೆ ಸೇರಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಷೇರು ಟ್ರೇಡಿಂಗ್ ವ್ಯವಹಾರ ನಡೆಸುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾರುತ್ತಿದ್ದ. ಈತನ ಬಳಿ 2.45 ಕೆಜಿ ಹೈಡ್ರೋ ಗಾಂಜಾ ಸಿಕ್ಕಿದೆ. ತಪ್ಪಿಸಿಕೊಂಡಿರುವ ಪ್ಯಾರಿಸ್ ಪಾಲುದಾರಿಕೆಯಲ್ಲಿ ಆರೋಪಿ ದಂಧೆ ನಡೆಸುತ್ತಿದ್ದ. ಥೈಲ್ಯಾಂಡ್ ದೇಶದಿಂದ ಕೇರಳಕ್ಕೆ ಅಕ್ರಮವಾಗಿ ಹೈಡ್ರೋ ಗಾಂಜಾ ತಂದು ಅಲ್ಲಿಂದ ನಗರಕ್ಕೆ ಪ್ಯಾರಿಸ್ ಪೂರೈಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಮಡಿವಾಳ ಪೊಲೀಸರು 36 ಲಕ್ಷ ರು ಮೌಲ್ಯದ 36 ಕೆಜಿ ಗಾಂಜಾ, ಆರ್‌ಎಂಸಿ ಯಾರ್ಡ್ ಪೊಲೀಸರು 72.30 ಲಕ್ಷ ರು 1.33 ಗ್ರಾಂ ಹೈಡ್ರೋ ಗಾಂಜಾ, ವೈಟ್‌ಫೀಲ್ಡ್ ಪೊಲೀಸರು 22 ಲಕ್ಷ ರು ಬೆಲೆಯ 22 ಕೆಜಿ ಗಾಂಜಾ ಹಾಗೂ ತಿಲಕನಗರ ಠಾಣೆ ಪೊಲೀಸರು 20 ಲಕ್ಷ ರು ಬೆಲೆಯ 20.200 ಕೆಜಿ ಗಾಂಜಾ ಹಾಗೂ ಇಂದಿರಾನಗರ ಪೊಲೀಸರು 3.24 ಲಕ್ಷ ರು ಬೆಲೆಯ 3.247 ಕೆಜಿವನ್ನು ಪ್ರತ್ಯೇಕವಾಗಿ ಜಪ್ತಿ ಮಾಡಿದ್ದಾರೆ. ರಾಜಾಜಿನಗರ ಪೊಲೀಸರು 15.84 ಲಕ್ಷ ರು ಮೌಲ್ಯದ ತಂಬಾಕು ಉತ್ಪನ್ನಗಳನ್ನು ಸುಪರ್ದಿಗೆ ಪಡೆದಿದ್ದಾರೆ. ಇನ್ನು 300-ಇ ಸಿಗರೇಟ್, 90 ಹುಕ್ಕಾ ಫ್ಲೇವರ್‌ಗಳು ಹಾಗೂ 30 ಹುಕ್ಕಾ ಪಾಟ್‌ಗಳು ಸೇರಿದಂತೆ 8 ಲಕ್ಷ ರು ಮೌಲ್ಯದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಯಶವಂತಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸುಬ್ರಹ್ಮಣ್ಯನಗರ ಪೊಲೀಸರ ಬಲೆಗೆ ಮತ್ತೊಬ್ಬ ಪೆಡ್ಲರ್ ಸೆರೆಯಾಗಿದ್ದಾನೆ. ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯ ಕೆ.ಪ್ರಸಾದ್ ಬಂಧಿತನಾಗಿದ್ದು, ಆರೋಪಿಯಿಂದ 45.855 ಕೆಜಿ ಗಾಂಜಾ, 237 ಗ್ರಾಂ ಹೈಡ್ರೋ ಗಾಂಜಾ ಹಾಗೂ ಮೊಬೈಲ್ ಸೇರಿದಂತೆ 69.64 ಲಕ್ಷ ರು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ರಾಜಾಜಿನಗರದ ಮಿಲ್ಕ್ ಪಾರ್ಕ್ ಬಳಿಕ ಬಾಕ್ಸ್‌ಗಳಲ್ಲಿ ಗಾಂಜಾ ತುಂಬಿ ಮಾರಾಟಕ್ಕೆ ಯತ್ನಿಸಿದ್ದಾಗ ಇನ್ಸ್‌ಪೆಕ್ಟರ್ ಗುರುಪ್ರಸಾದ್ ತಂಡ ಬಂಧಿಸಿದೆ. ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಪ್ರಸಾದ್, ಕೆ.ಆರ್.ಪುರ ಸಮೀಪದ ನೆಲ್ಲೂರಿನಲ್ಲಿ ನೆಲೆಸಿದ್ದ. ಫ್ರಿಡ್ಜ್, ಎಸಿ ರಿಪೇರಿ ಕೆಲಸಗಾರನಾಗಿ ದುಡಿದು ಆತ ಜೀವನ ಸಾಗಿಸುತ್ತಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಪ್ರಸಾದ್ ಅಡ್ಡದಾರಿ ತುಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
- ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತರು, ಬೆಂಗಳೂರು