ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಸರಗಳ್ಳತನ ಕೃತ್ಯದಲ್ಲಿ ನಿರತರಾಗಿದ್ದ ರೌಡಿ ಸೇರಿದಂತೆ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಮಣ್ಣ ಗಾರ್ಡನ್‌ ನಿವಾಸಿಗಳಾದ ನಯೀಮ್ ಪಾಷ ಅಲಿಯಾಸ್ ಪಿಂಟು, ಮುದಾಸೀರ್ ಹಾಗೂ ಇಮ್ರಾನ್ ಬಂಧಿತರಾಗಿದ್ದು, ಆರೋಪಿಗಳಿಂದ 23 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ವಿಜಯನಗರದ ರೆಮ್ಕೋ ಲೇಔಟ್‌ನಲ್ಲಿ ರೇಣುಕಾ ಎಂಬಾಕೆವಾಯುವಿಹಾರ ಮಾಡುವಾಗ ಕಿಡಿಗೇಡಿಗಳು ಸರ ಅಪಹರಿಸಿದ್ದರು. ಈ ಕೃತ್ಯದ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸುರೇಶ್ ಹಾಗೂ ಸಬ್‌ ಇನ್ಸ್‌ಪೆಕ್ಟರ್ ಶೈಲಾ ಕಂಬಳಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಪಾಷ ಹಾಗೂ ಇಮ್ರಾನ್‌ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳತ್ತಿ ಇಬ್ಬರು ತೊಡಗಿದ್ದಾರೆ. ಪಾಷ ವಿರುದ್ಧ ಕೊಲೆ, ರಾಬರಿ, ಸರ ಅಪಹರಣ, ಮನೆಕಳವು ಹಾಗೂ ವಾಹನ ಕಳವು ಸೇರಿದಂತೆ 10ಕ್ಕೂ ಹೆಚ್ಚಿನ ಪ್ರಕರಣಗಳಾಗಿದ್ದು, ಈ ಕ್ರಿಮಿನಲ್ ಚರಿತ್ರೆ ಕಾರಣಕ್ಕೆ ಆತನ ಮೇಲೆ ಬ್ಯಾಟರಾಯನಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಅದೇ ರೀತಿ ಮುದಾಸೀರ್ ವಿರುದ್ಧ ಮನೆ ಕಳವು ಹಾಗೂ ಕೊಲೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಪೈಕಿ ಹಳೇ ಪ್ರಕರಣಗಳಲ್ಲಿ ವಿಚಾರಣೆ ಗೈರಾದ ಕಾರಣಕ್ಕೆ ಆರೋಪಿ ವಿರುದ್ಧ 14ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಬಾಕಿ ಇವೆ ಎಂದು ಪೊಲೀಸರು ವಿವರಿಸಿದ್ದಾರೆ.


ಏಕಾಂಗಿ ಮಹಿಳೆ ಟಾರ್ಗೆಟ್‌:

ರಸ್ತೆಯಲ್ಲಿ ಏಕಾಂಗಿಯಾಗಿ ಸಂಚರಿಸುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಸರ ಅಪಹರಿಸುತ್ತಿದ್ದರು. ಅದರಂತೆ ಜೂ.3 ರಂದು ರಾತ್ರಿ 11 ಗಂಟೆಯಲ್ಲಿ ಮನೆ ಮುಂದೆ ತಮ್ಮ ಸೋದರಿ ಮಗಳ ಜತೆ ರೇಣುಕಾ ವಾಯು ವಿಹಾರ ನಡೆಸುವಾಗ ಅವರಿಂದ ಈ ಇಬ್ಬರು ಸರ ದೋಚಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.