ಕನ್ನಡಪ್ರಭ ವಾರ್ತೆ ಬೆಂಗಳೂರು

ಮದುವೆಗೆ ನಿರಾಕರಿಸಿದಕ್ಕೆ ಕೆರಳಿ ಗೆಳತಿಯನ್ನು ಚಾಕುವಿನಿಂದ ಇರಿದು ಕೊಂದವನನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭುವನೇಶ್ವರಿ ನಗರದ ನಿವಾಸಿ ಅಂಜಲಿ (23) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸ್ನೇಹಿತ ಲಗ್ಗೆರೆಯ ರಾಜೀವ್‌ ಎಂಬಾತನನ್ನು ಬಂಧಿಸಲಾಗಿದೆ. ಮಹಾಲಕ್ಷ್ಮೀ ಲೇಔಟ್‌ನ ಆದಿತ್ಯ ಜಂಕ್ಷನ್ ಸಮೀಪ ವೈಯಕ್ತಿಕ ವಿಚಾರವಾಗಿ ಭಾನುವಾರ ರಾತ್ರಿ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಅಂಜಲಿಗೆ ಚಾಕುವಿನಿಂದ ಇರಿದು ರಾಜೀವ್ ಪರಾರಿಯಾಗಿದ್ದ. ಬಳಿಕ ಕೆಲವೇ ತಾಸುಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ಕುಟುಂಬದ ಜತೆ ಅಂಜಲಿ ಭುವನೇಶ್ವರಿ ನಗರದಲ್ಲಿ ನೆಲೆಸಿದ್ದಾರೆ. ಅದೇ ಪ್ರದೇಶದಲ್ಲಿ ರಾಜೀವ್ ಸೋದರ ಸಂಬಂಧಿಗಳು ನೆಲೆಸಿದ್ದರು. ತನ್ನ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಅಂಜಲಿ ಪರಿಚಯವಾಗಿದೆ. ಇದಾದ ನಂತರ ಆರು ವರ್ಷಗಳು ಖಾಸಗಿ ಕಾರು ಮಾರಾಟ ಮಳಿಗೆಯಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಅಂಜಲಿ ಜೊತೆಗೆ ರಾಜೀವ್ ಪ್ರೇಮವಾಗಿದೆ. ಈ ಪ್ರೇಮಕ್ಕೆ ಅಂಜಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಪರಾಧ ಹಿನ್ನೆಲೆಯುಳ್ಳ ರಾಜೀವ್ ಜತೆ ಮದುವೆಗೆ ಅವರು ನಿರಾಕರಿಸಿದ್ದರು. ಇದಾದ ಬಳಿಕ ಆತನಿಂದ ಅಂಜಲಿ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಳು ಎಂದು ತಿಳಿದು ಬಂದಿದೆ.

ಮಹಾಲಕ್ಷ್ಮೀ ಲೇಔಟ್‌ನ ಆದಿತ್ಯ ಜಂಕ್ಷನ್ ಬಳಿ ಎಗ್‌ ರೈಸ್ ತಿನ್ನಲು ಸ್ನೇಹಿತೆಯನ್ನು ರಾಜೀವ್ ಕರೆತಂದಿದ್ದಾನೆ. ಆಗ ಮದುವೆ ಪ್ರಸ್ತಾಪ ಮಾಡಿದ್ದಕ್ಕೆ ಅಂಜಲಿ ನಿರಾಕರಿಸಿದಾಗ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಅಂಜಲಿಗೆ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.