ನರೇಗಾ ಹಬ್ಬ: ಜಿಲ್ಲೆಗೆ 3 ಪ್ರಶಸ್ತಿ

KannadaprabhaNewsNetwork |  
Published : Feb 06, 2025, 11:49 PM IST
ನರೇಗಾ ಪ್ರಶಸ್ತಿ ಸ್ವೀಕರಿಸಿದ ಜಿ.ಪಂ. ಸಿಇಓ ಜಿ. ಪ್ರಭು | Kannada Prabha

ಸಾರಾಂಶ

ತುಮಕೂರು ಜಿಲ್ಲಾ ಪಂಚಾಯಿತಿಗೆ 2025 ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ಹಾಗೂ ಕಾಯಕ ಬಂಧು ಗಂಗಮ್ಮ ಅವರಿಗೆ ಮೇಟ್ ಪ್ರಶಸ್ತಿ ಸೇರಿ 3 ಪ್ರಶಸ್ತಿಗಳು ಲಭಿಸಿವೆ.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಜಿಲ್ಲಾ ಪಂಚಾಯಿತಿಗೆ 2025 ರ ನರೇಗಾ ಪ್ರಶಸ್ತಿ, ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ಹಾಗೂ ಕಾಯಕ ಬಂಧು ಗಂಗಮ್ಮ ಅವರಿಗೆ ಮೇಟ್ ಪ್ರಶಸ್ತಿ ಸೇರಿ 3 ಪ್ರಶಸ್ತಿಗಳು ಲಭಿಸಿವೆ.ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನರೇಗಾ ಹಬ್ಬ-2025 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತುಮಕೂರು ಜಿಪಂ ಸಿಇಒ ಪ್ರಭು ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್, ಅಪರ ಮುಖ್ಯ ಕಾರ್ಯದರ್ಶಿ(ಗ್ರಾಮೀಣಾಭಿವೃದ್ಧಿ) ಅಂಜುಮ್ ಪರ್ವೇಜ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ ಕುಮಾರ್ ಮಲಪಾಟಿ ಉಪಸ್ಥಿತರಿದ್ದರು.ನರೇಗಾ ಯೋಜನೆಯಡಿ ಜಿಲ್ಲೆಗೆ 2023-24ನೇ ಸಾಲಿಗಾಗಿ 42 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿದ್ದು, 63 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಜಿಲ್ಲೆಯು ಶೇಕಡ 150ರಷ್ಟು ಸಾಧನೆ ಮಾಡಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಾದ ಶಾಲೆ, ಆಸ್ಪತ್ರೆ, ರಸ್ತೆ, ಚರಂಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆದ್ಯತೆ ಮೇರೆಗೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ 2023-24ನೇ ಸಾಲಿನಲ್ಲಿ 123 ಕೋಟಿ ರು.ವೆಚ್ಚದಲ್ಲಿ 4015 ಶಾಲಾ ಅಭಿವೃದ್ಧಿ, 98 ಕೋಟಿ ರು. ವೆಚ್ಚದಲ್ಲಿ 2080 ರಸ್ತೆ ಕಾಮಗಾರಿ, 85 ಕೋಟಿ ರು. ವೆಚ್ಚದಲ್ಲಿ 2069 ಚರಂಡಿ ಕಾಮಗಾರಿ, 12 ಕೋಟಿ ರು. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ಸಂಜೀವಿನಿ ಭವನ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ.ಬರದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಿಷನ್ 500 ಅಭಿಯಾನವನ್ನು ಹಮ್ಮಿಕೊಂಡು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯ 400 ರಿಂದ 500 ರೈತರನ್ನು ಗುರುತಿಸಿ ಅವರಿಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡುವ ಅಭಿಯಾನ ಮಾಡಲಾಗಿದೆ. ಈ ಅಭಿಯಾನದಡಿ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 52,400 ಬದು ಕಾಮಗಾರಿಗಳನ್ನು ರೈತರಿಗೆ ನೀಡಲಾಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ 1010 ಕೆರೆ ಅಭಿವೃದ್ಧಿ, 1450 ನಾಲಾ ಅಭಿವೃದ್ಧಿ, 15200 ಅರಣ್ಯೀಕರಣದ ಕಾಮಗಾರಿಗಳು ಸೇರಿದಂತೆ ತೋಟಗಾರಿಕೆ, ರೇಷ್ಮೆ ಹಾಗೂ ಕೃಷಿ ಇಲಾಖೆಯಲ್ಲಿಯೂ ಉದ್ಯೋಗವನ್ನು ನೀಡಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಉಜ್ಜಿನಿಗೆ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ: ಕುಣಿಗಲ್ ತಾಲೂಕಿನ ಉಜ್ಜಿನಿ ಗ್ರಾಮ ಪಂಚಾಯಿತಿಗೆ 2025 ರ ನರೇಗಾ ಹಬ್ಬದಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ದಕ್ಕಿದೆ. 2023-24ನೇ ಸಾಲಿನಲ್ಲಿ 75,000 ಮಾನವ ದಿನಗಳ ಸೃಜನೆ ಮತ್ತು ಸಮುದಾಯ ಆಸ್ತಿಗಳ ಸೃಜನೆಯಲ್ಲಿ ಮುಂಚೂಣಿಯಲ್ಲಿರುವ ಹಿನ್ನೆಲೆಯಲ್ಲಿ ಉಜ್ಜಿನಿ ಗ್ರಾಮ ಪಂಚಾಯಿತಿಗೆ ಈ ಪ್ರಶಸ್ತಿ ಸಿಕ್ಕಿದೆ.ಪಾವಗಡ ಗಂಗಮ್ಮಗೆ ಒಲಿದ ಕಾಯಕಬಂಧು ಪ್ರಶಸ್ತಿ :ಪಾವಗಡ ತಾಲೂಕಿನ ಸಿಕೆ ಪುರ ಗ್ರಾಮ ಪಂಚಾಯಿತಿಯ ಗಂಗಮ್ಮ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 329 ಕುಟುಂಬಗಳಿಗೆ ಉದ್ಯೋಗ ಕೊಡಿಸಿದ್ದು, ಇದರಲ್ಲಿ 246 ಕುಟುಂಬಗಳು 100 ದಿನಗಳ ನರೇಗಾ ಕೂಲಿಯನ್ನು ಮುಗಿಸುವಲ್ಲಿ ಯಶಸ್ವಿಯಾಗಿವೆ. ಈ ಕಾರಣದಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಪಡಿಸುವ ನಿಟ್ಟಿನಲ್ಲಿ ಸಾಧನೆ ಮಾಡಿದ ಗಂಗಮ್ಮನವರಿಗೆ ಕಾಯಕ ಬಂಧು ಪ್ರಶಸ್ತಿ ಲಭಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ