ಗದಗ: ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024 ಏ. 1ರಿಂದ ಮೇ ಅಂತ್ಯದ ವರೆಗೂ ವಲಸೆ ಯಾಕ್ರಿ? ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ ಅಭಿಯಾನ ನಡೆಸಲಾಗುತ್ತದೆ.ಗ್ರಾಮೀಣ ಭಾಗದ ಬಡ ಕುಟುಂಬಗಳ ಜೀವನೋಪಾಯದ ಭದ್ರತೆ ಹೆಚ್ಚಿಸುವ ಮತ್ತು ಬೇಸಿಗೆಯಲ್ಲಿ ಸ್ಥಳೀಯವಾಗಿ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಅಭಿಯಾನ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಯಡಿ ನೋಂದಾಯಿತ ಕುಟುಂಬದ ಕೂಲಿಕಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ ಪ್ರಸಕ್ತ 2024 ಏ. 1ರಿಂದ ಮೇ ಅಂತ್ಯದವರೆಗೂ ಅಭಿಯಾನ ಹಮ್ಮಿಕೊಂಡಿದ್ದು, ಬೇಸಿಗೆ ತಾಪ ಹೆಚ್ಚಾಗಿರುವ ಕಾರಣ ಗ್ರಾಮೀಣ ಕೂಲಿಕಾರರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಕೂಲಿ ಹಣವನ್ನು ಇ-ಎಫ್ಎಂಎಸ್ ಮುಖಾಂತರ ನೇರವಾಗಿ ವೈಯಕ್ತಿಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಜಿಪಂ ಸಿಇಒ ಭರತ್ ಎಸ್. ಹೇಳುತ್ತಾರೆ. ಯೋಜನೆಯ ಐಇಸಿ ಚಟುವಟಿಕೆ ಮುಖಾಂತರ ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಅಗತ್ಯ ಕ್ರಮವಹಿಸಲಾಗಿದೆ. ಗ್ರಾಮೀಣ ಜನರು ಉದ್ಯೋಗ ಬೇಡಿಕೆ ನೀಡಿದ ತಕ್ಷಣ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ಎಲ್ಲ ಪಿಡಿಒ ಮತ್ತು ಅನುಷ್ಠಾನ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಯಕ ಬಂಧುಗಳ ಸಭೆ ಆಯೋಜಿಸಿ ಕ್ರಿಯಾಶೀಲವಲ್ಲದ ಉದ್ಯೋಗ ಚೀಟಿದಾರರನ್ನು ಒಳಗೊಂಡು ಕೂಲಿಕಾರರ ಸಂಘವನ್ನು ರಚಿಸಲಾಗುತ್ತಿದೆ. ಅದಕ್ಕೆ ಒಬ್ಬ ಹೊಸ ಕಾಯಕ ಬಂಧುವನ್ನು ನೇಮಿಸಲಾಗುತ್ತಿದೆ. ಅವರ ಮೂಲಕ ಕೂಲಿ ಬೇಡಿಕೆ ಪಡೆಯಲು ಗ್ರಾಪಂಗಳ ವಾರ್ಡ್‌ಗಳಲ್ಲಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ವಿಶೇಷ ಅಭಿಯಾನ ಆಯೋಜಿಸಲಾಗುತ್ತಿದೆ. ಕೂಲಿಕಾರರಿಂದ ಕೂಲಿ ಬೇಡಿಕೆ ಪಡೆದು ಕೆಲಸ ಒದಗಿಸಲಾಗುತ್ತಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನೆ ಹೇಳಿದರು.