ಬರ ಪೀಡಿತ ಪ್ರದೇಶದಲ್ಲಿ ಆರ್ಥಿಕ ಬಲ ನೀಡುತ್ತಿದೆ ನರೇಗಾ

KannadaprabhaNewsNetwork | Published : Mar 8, 2024 1:48 AM

ಸಾರಾಂಶ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಒಟ್ಟು 35,430 ಕುಟುಂಬಗಳು ಉದ್ಯೋಗ ಚೀಟಿ ಹೊಂದಿದ್ದು, ಕಾರ್ಕಳ ತಾಲೂಕಿನಲ್ಲಿ 28,572, ಹೆಬ್ರಿ ತಾಲೂಕಿನಲ್ಲಿ 6,858 ಉದ್ಯೋಗ ಚೀಟಿ ಹೊಂದಿದ ಕುಟುಂಬಗಳಿವೆ. ಕಳೆದ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ನರೇಗಾ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.

ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಿಸಿದೆ. ಆದರೆ ಬರಪೀಡಿತ ತಾಲೂಕಿನಲ್ಲಿ ಶ್ರಮಿಕ ವರ್ಗಗಳಿಗೆ ಬಲ ತುಂಬಲು ಕಾರ್ಕಳ ಹಾಗೂ ಹೆಬ್ರಿ ತಾಲೂಕು ಪಂಚಾಯಿತಿಗಳು ಉದ್ಯೋಗ ಖಾತರಿ ಯೋಜನೆಗಳಿಂದ ಕಾಮಗಾರಿಗಳನ್ನು ನಡೆಸಿ ಆರ್ಥಿಕ ಸದೃಢತೆಯನ್ನು ನೀಡಿದೆ.

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಒಟ್ಟು 35,430 ಕುಟುಂಬಗಳು ಉದ್ಯೋಗ ಚೀಟಿ ಹೊಂದಿದ್ದು, ಕಾರ್ಕಳ ತಾಲೂಕಿನಲ್ಲಿ 28,572, ಹೆಬ್ರಿ ತಾಲೂಕಿನಲ್ಲಿ 6,858 ಉದ್ಯೋಗ ಚೀಟಿ ಹೊಂದಿದ ಕುಟುಂಬಗಳಿವೆ. ಕಳೆದ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ನರೇಗಾ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.* ಕಾಮಗಾರಿ ಸೌಲಭ್ಯ ಮೊತ್ತ ಹೆಚ್ಚಳಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಯೋಜನೆಯಲ್ಲಿ ನೀಡಲಾಗುವ ವೈಯಕ್ತಿಕ ಕಾಮಗಾರಿ ಸೌಲಭ್ಯದ ಮೊತ್ತವನ್ನು ಸರ್ಕಾರ 2.50 ಲಕ್ಷ ರು. ನಿಂದ 5 ಲಕ್ಷ ವರೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ 5 ಲಕ್ಷ ರು. ವರೆಗಿನ ವೈಯಕ್ತಿಕ ಕಾಮಗಾರಿ ನಡೆಸಲು ಸಹಾಯವಾಗಲಿದೆ.

* ಯಾರಿಗೆಲ್ಲ ಅನ್ವಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬ, ಅಂಗವಿಕಲ ಕುಟುಂಬಗಳು, ಭೂ- ಸುಧಾರಣೆ, ವಸತಿ ಯೋಜನೆಗಳ ಫಲಾನುಭವಿಗಳು, ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ ಬುಡಕಟ್ಟು ಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು, ಸಣ್ಣ, ಅತೀ ಸಣ್ಣ ರೈತರು ಈ ವರ್ಗದವರು ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ.* ನಡೆಸಬಹುದಾದ ಕಾಮಗಾರಿಗಳು:ತೋಟಗಾರಿಕೆ ಇಲಾಖೆಯಲ್ಲಿ ಅಡಕೆ ಹೊಸ ತೋಟ ರಚನೆ, ಹೊಸ ತೆಂಗಿನ ತೋಟ, ಅಡಕೆಯಲ್ಲಿ ಕಾಳುಮೆಣಸು ಹೊಸ ತೋಟ ರಚನೆ, ತೆಂಗಿನಲ್ಲಿ ಕಾಳು ಮೆಣಸು, ಗೇರು, ಕೊಕ್ಕೋ, ಸೀಬೆ, ಅಂಗಾಂಶ ಕೃಷಿ ಬಾಳೆ, ಪಪ್ಪಾಯಿ, ಬೆಣ್ಣೆ ಹಣ್ಣು, ರಾಂಬೂಟಾನ್, ಡ್ರಾಗನ್ ಫ್ರುಟ್ಸ್, ವೀಳ್ಯದೆಲೆ, ಮಾವು, ಸಪೋಟ, ನುಗ್ಗೆ, ಗುಲಾಬಿ, ಅಡಕೆ ಪುನಃಶ್ಚೇತನ, (ಮರುನಾಟಿ) ಪೌಷ್ಟಿಕ ಕೈ ತೋಟ ಹಾಗೂ ಉಡುಪಿ ಮಲ್ಲಿಗೆ ಪ್ರದೇಶ ನಿರ್ಮಾಣ, ಕೋಳಿ ಸಾಕಾಣಿಕೆ ಶೆಡ್, ದನದ ಹಟ್ಟಿ, ಜೈವಿಕ ಅನಿಲಸ್ಥಾವರ, ಎರೆಹುಳು ತೊಟ್ಟಿ ಘಟಕ, ಗೊಬ್ಬರಗುಂಡಿ, ಹಂದಿ ಶೆಡ್, ಕುರಿ ಶೆಡ್, ಕೊಳವೆ ಬಾವಿ ಜಲ ಮರುಪೂರಣ, ಅಜೋಲಾ ಪಿಟ್ಸ್ ವಿಸ್ತರಣೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಅನ್ವಯವಾಗಲಿದೆ.-------------

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ಶ್ರಮಿಕರಿಗೆ 100 ದಿನಗಳ ಉದ್ಯೋಗ ನೀಡಿ ಆರ್ಥಿಕ ಪುನಶ್ಚೇತನ ಗೊಳಿಸುವುದೇ ಈ ಯೋಜನೆ ಉದ್ದೇಶ. ನೋಂದಾಯಿತ ಕುಟುಂಬಗಳು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಲಿ. ಆರ್ಥಿಕ ಸಬಲೀಕರಣಗೊಳಿಸಲು ನರೇಗಾ ಯೋಜನೆ ಉತ್ತಮ ವೇದಿಕೆಯಾಗಿದೆ.। ಶಶಿಧರ್ ಕೆ.ಜೆ., ಕಾರ್ಯನಿರ್ವಾಹಕ ಅಧಿಕಾರಿ ಹೆಬ್ರಿ-------------------

ಉದ್ಯೋಗ ಖಾತರಿ ಯೋಜನೆಯಿಂದ ನನ್ನ ಮನೆಗೆ ಬಾವಿ ನಿರ್ಮಾಣ ಹಾಗೂ ಬಚ್ಚಲು ಗುಂಡಿಗಳ‌ ವ್ಯವಸ್ಥೆಯನ್ನು ‌ಮಾಡಲಾಗಿದೆ. ಸರ್ಕಾರದ ಯೋಜನೆಗಳು ಸದುಪಯೋಗಗೊಂಡರೆ ಖುಷಿ. ಪಂಚಾಯಿತಿಯ ಸಹಕಾರ ಖುಷಿ ತಂದಿದೆ.। ರತ್ನ ಪೂಜಾರ್ತಿ, ಪಲಾಯಿ ಬಾಕ್ಯಾರು ತೆಳ್ಳಾರು, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿ

Share this article