ಬಿ.ರಾಮಪ್ರಸಾದ್ ಗಾಂಧಿ
ಕೂಲಿಕಾರರಿಗೂ ಆಸರೆಯಾಗಬೇಕು ಎನ್ನುವ ಉದ್ದೇಶದಿಂದ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ ತಂಡ ಕಾರ್ಯೋನ್ಮುಖವಾಗಿ 2024-25ರಲ್ಲಿ ಕೆರೆಗಳಲ್ಲಿ ಕೃಷಿ ಹೊಂಡ, ಜಮೀನುಗಳಲ್ಲಿ ಬದು ನಿರ್ಮಾಣಕ್ಕೆ ಮುಂದಾಯಿತು. ಈ ವರ್ಷ 2024 ಕೃಷಿ ಹೊಂಡಗಳನ್ನು ನಿರ್ಮಿಸಲಾಯಿತು. ಕಳೆದ ಒಂದು ವಾರದಿಂದ ಬಿದ್ದ ಮಳೆಯಿಂದ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ.
ಡಾ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ತಾಲೂಕು ಒಂದು. ಈ ತಾಲೂಕು ಒಮ್ಮೆ ಬರ ಮಗದೊಮ್ಮೆ ಅತಿವೃಷ್ಟಿಗೆ ಹೆಸರವಾಸಿ. ಈ ವರ್ಷ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಕೂಲಿಕಾರರ ಜೀವನ ಕಷ್ಟದಾಯಕವಾಯಿತು. ಇಂತಹ ಸಂದರ್ಭದಲ್ಲಿ ಕೂಲಿಕಾರರಿಗೆ ಆಸರೆಯಾಗಿದ್ದು ನರೇಗಾ ಯೋಜನೆ.6304 ಬದು ನಿರ್ಮಾಣದಿಂದ 6 ಸಾವಿರ ಗುಂಡಿಗಳು ಸೃಷ್ಟಿಯಾಗಿದ್ದು, ನೀರಿನಿಂದ ಭರ್ತಿಯಾಗಿವೆ. ಈ ಹಿಂದೆ ಕೆರೆಗಳಲ್ಲಿ ಹೂಳು ತೆಗೆಯುವ ಕೆಲಸ ಕೊಡಲಾಗುತ್ತಿತ್ತು. ಇದು ಒಳ್ಳೆಯ ಕೆಲಸವಾದರೂ ಹೂಳನ್ನು ಎತ್ತಿ ಪಕ್ಕದಲ್ಲಿಯೇ ಹಾಕಲಾಗುತ್ತಿತ್ತು. ಮಳೆ ಬಂದಾಗ ಪುನಃ ಹೂಳು ತುಂಬುತ್ತಿತ್ತು.
ದಿನವೊಂದಕ್ಕೆ ₹349 ಕೂಲಿ ನೀಡಲಾಗುತ್ತಿದೆ. ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣದಿಂದ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಜಮೀನಿಗೂ ಭದ್ರತೆ ಒದಗುತ್ತದೆ.
ಒಟ್ಟಿನಲ್ಲಿ ನರೇಗಾದಿಂದ ಈ ವರ್ಷ ಕೂಲಿಕಾರರಿಗೆ ಬರದ ಬೇಗೆಗೆ ಆಸರೆಯಾಗುವುದರ ಜೊತೆಗೆ ಕೃಷಿ ಹೊಂಡ, ಬದು ನಿರ್ಮಾಣದಿಂದ ಉಂಟಾದ ಗುಂಡಿಗಳು ಶಾಶ್ವತವಾಗಿದ್ದು, ಇದರಲ್ಲಿ ಸಂಗ್ರಹವಾಗುವ ಮಳೆನೀರಿನಿಂದ ಅಂತರ್ಜಲ ಹೆಚ್ಚುವುದರಲ್ಲಿ ಸಂಶಯವಿಲ್ಲ. ಬರಕ್ಕೆ ನರೇಗಾ ಮದ್ದಾಗಿ ಪರಿಣಮಿಸಿದೆ.
ಈ ವರ್ಷ ಬರಗಾಲ ಇದ್ದಿದ್ದರಿಂದ ಕೂಲಿಕಾರರಿಗೆ ಕೆಲಸ ನೀಡುವುದರ ಜೊತೆಗೆ ಕೃಷಿ ಹೊಂಡದಂತಹ ಕಾಮಗಾರಿ ಕೈಗೊಂಡು ಶಾಶ್ವತ ಆಸ್ತಿ ಸೃಜನೆಮಾಡಿದ್ದೇವೆ. ಆಸಕ್ತ ಕೂಲಿಕಾರರು ನರೇಗಾ ಕೆಲಸಕ್ಕಾಗಿ ಇನ್ನು ಬೇಡಿಕೆ ಸಲ್ಲಿಸಬಹುದು ಎನ್ನುತ್ತಾರೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ.