ಕನ್ನಡಪ್ರಭ ವಾರ್ತೆ ಮಾಲೂರು
ಚುನಾವಣೆ ಸಂಹಿತೆಯ ಅವಧಿ ಮುಗಿಯುತ್ತಿದ್ದ ಹಾಗೆ ಮಾಲೂರು ಪಟ್ಟಣದ ಬಸ್ ನಿಲ್ದಾಣವನ್ನು ೧೫ ಕೋಟಿ ರೂಗಳ ವೆಚ್ಚದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಬಸ್ ನಿಲ್ದಾಣ, ೨೧ ಕೋಟಿ ರೂಗಳ ವೆಚ್ಚದಲ್ಲಿ ಪಟ್ಟಣದ ದೊಡ್ಡ ಕೆರೆಯ ಅಭಿವೃದ್ಧಿ, ೩೫೦ ಕೋಟಿ ರು.ಗಳ ವೆಚ್ಚದಲ್ಲಿ ಬೆಂಗಳೂರು ರಸ್ತೆಯ ಹಾರೋಹಳ್ಳಿ ಕ್ರಾಸ್ ನಿಂದ ರೈಲ್ವೆ ಸೇತುವೆವರೆಗೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣದ ಯೋಜನಾ ಪ್ರಾಧಿಕಾರದ ಕಾರ್ಯಾಲಯದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
ಸಾರ್ವಜನಿಕರಿಗೆ ಅನುಕೂಲಪಟ್ಟಣದ ಬಸ್ ನಿಲ್ದಾಣವು ಕಿರಿದಾಗಿರುವುದರಿಂದ ಬಸ್ ನಿಲ್ದಾಣವನ್ನು ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆಗಾಗಿ ಯೋಜನಾ ಪ್ರಾಧಿಕಾರದ ೫ ಕೋಟಿ ರೂಗಳು, ಸಂಸ್ಥೆಯ ೫ ಕೋಟಿ ಎಯುಐಡಿಎಸ್ ಸಂಸ್ಥೆಯಿಂದ ೫ ಕೋಟಿ ಸಾಲ ಪಡೆದು, ಒಟ್ಟು ೧೫ ಕೋಟಿ ರೂಗಳ ವೆಚ್ಚದಲ್ಲಿ ಪಟ್ಟಣದಲ್ಲಿ ಆಧುನಿಕ ಬಸ್ ನಿಲ್ದಾಣವನ್ನು ನಿರ್ಮಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಪಟ್ಟಣದ ದೊಡ್ಡ ಕೆರೆಯನ್ನು ಯೋಜನಾ ಪ್ರಾಧಿಕಾರದ ೨೧ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಕೆರೆಯ ಸುತ್ತಲೂ ವಾಕಿಂಗ್ ಟ್ರ‍್ಯಾಕ್, ಸುತ್ತಲು ಬೀದಿ ದೀಪ, ಉದ್ಯಾನವನ, ಕೆರೆಯ ಮಧ್ಯದಲ್ಲಿ ಐಲ್ಯಾಂಡ್ ನಿರ್ಮಿಸಿ ಪಟ್ಟಣದ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಂ ಉಲ್ಲಾ ಖಾನ್, ಕಾರ್ಯದರ್ಶಿ ಕೃಷ್ಣಪ್ಪ, ಪುರಸಭೆ ಸದಸ್ಯರಾದ ಇಮ್ತಿಯಾಜ್ ಖಾನ್, ರಾಜಪ್ಪ, ರಾಮಮೂರ್ತಿ, ಮುರಳಿಧರ್, ಜಾಕಿರ್ ಖಾನ್, ಯೋಜನಾ ಪ್ರಾಧಿಕಾರ ಸದಸ್ಯರಾದ ಮಂಜುನಾಥ ರೆಡ್ಡಿ, ಚಿರಂಜೀವಿ, ನಾಗರಾಜ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.