ಕನ್ನಡಪ್ರಭ ವಾರ್ತೆ ಹುಣಸೂರು
ಶೈಕ್ಷಣಿಕ ವ್ಯವಸ್ಥೆ ಗಟ್ಟಿಗೊಳಿಸುವ ಮತ್ತು ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಬುದ್ಧಿವಂತಿಕೆ ಮತ್ತು ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್.ಕೆ. ಪಾಂಡು ಸೂಚಿಸಿದರು.ಪಟ್ಟಣದ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ ಹುಣಸೂರು ಉಪವಿಭಾಗ ಮಟ್ಟದ ಅನುಷ್ಟಾನಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮತ್ತು 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಕ್ರಿಯಾಯೋಜನೆ ಸಿದ್ಧತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅನುಷ್ಟಾನಾಧಿಕಾರಿಗಳಾದ ಸಿಆರ್ಪಿ, ಬಿಆರ್.ಸಿ, ಇಸಿಒ, ಬಿಐಇಆರ್.ಟಿ ಅಧಿಕಾರಿಗಳು ಕೇವಲ ಪಾಠ, ಪುಸ್ತಕ, ಅಕ್ಷರ ದಾಸೋಹ, ದಾಖಲಾತಿ ಮುಂತಾದ ವಿಷಯಗಳ ಕುರಿತು ವರದಿ ನೀಡಿದರೆ ಸಾಲದು, ಸರ್ಕಾರ ರೂಪಿಸಿದ ಯೋಜನೆಗಳ ಅಂತಃಸತ್ವವನ್ನು ಅರಿತು ಕಾರ್ಯ ನಿರ್ವಹಿಸಿರಿ, ಸಿಆರ್.ಪಿ ಸಂಪನ್ಮೂಲ ವ್ಯಕ್ತಿಯಾಗಿ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿದೆ ಎಂದರೆ ಅದರ ನೇರ ಹೊಣೆ ಸಿಆರ್ಪಿಯೇ ಆಗುತ್ತಾರೆ ಎನ್ನುವ ನೆನಪು ನಿಮಗಿರಿಲಿ ಎಂದರು.ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ 22:1 ಆಗಿದ್ದು, ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುವ ಎಲ್ಲ ಅನುಕೂಲಗಳಿವೆ. ಶಾಲೆಯ ಸುತ್ತಮುತ್ತಲ ಪರಿಸರ ಸ್ವಚ್ಛತೆ, ಶೌಚಗೃಹಗಳ ಸ್ವಚ್ಛತೆಗೆ ಆಯಾ ಗ್ರಾಪಂ.ಗಳ ಸಹಕಾರ ಪಡೆಯಿರಿ. ಶಾಲಾ ಆವರಣದಲ್ಲಿ ವಿದ್ಯುತ್ ಕಂಬ, ಟಿಸಿ ಮುಂತಾದವುಗಳು ಇದ್ದರೆ ಕೂಡಲೇ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತನ್ನಿರಿ. ಕೊಳವೆಬಾವಿ, ಓವರ್ ಹೆಡ್ ಟ್ಯಾಂಕ್ಗಳಿದ್ದರೆ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತನ್ನಿರಿ. ಅಕ್ಷರದಾಸೋಹ ಕೊಠಡಿಗಳನ್ನು ಶುಚಿಯಾಗಿಟ್ಟುಕೊಳ್ಳಿರೆಂದು ಸೂಚಿಸಿದರು.
ಜೂನ್ ತಿಂಗಳು ಅತ್ಯಂತ ಮುಖ್ಯವಾದ ತಿಂಗಳಾಗಿದ್ದು, ದಾಖಲಾತಿ ಆಂದೋಲನ ನಡೆಸಿರಿ. ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಹಂತದ ಶಿಕ್ಷಣಕ್ಕೆ ಹೋಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿರಿ. ಗ್ರಾಮೀಣ ಭಾಗದಲ್ಲಿ ಶಾಲೆಗೆ ಸೇರಿಸಲು ಬರುವ ಪಾಲಕರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ನಿಮ್ಮಲ್ಲಿ ಅರಿವು ಇರಲಿ. ಆ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಗಮನಿಸಿ ಶಿಕ್ಷಣ ದೊರೆಯುವಲ್ಲಿ ಯಾವುದೇ ತೊಂದರೆಯುಂಟಾಗದಂತೆ ಕ್ರಮವಹಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಸಮುದಾಯುದತ್ತ ಶಾಲೆ ಯೋಜನೆಯಡಿ ಶೈಕ್ಷಣಿಕ ವರ್ಷದ ಇಡೀ ಕಾರ್ಯಕ್ರಮಗಳ ಕುರಿತು ಡಿಟಿಪಿ ಮಾಡಿಸಿ ಗ್ರಾಮದ ಮುಖಂಡರಿಗೆ ಮಾಹಿತಿ ನೀಡುವ ಕಾರ್ಯವನ್ನು ಕಡ್ಡಾಯವಾಗಿ ಮಾಡಿರಿ ಎಂದು ಸೂಚಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ರೇವಣ್ಣ ಮಾತನಾಡಿದರು. ಸಭೆಯಲ್ಲಿ ಹುಣಸೂರು, ಕೆ.ಅರ್.ನಗರ, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನ 143ಕ್ಕೂ ಹೆಚ್ಚು ಸಿಆರ್ಪಿ, ಬಿಆರ್ಪಿ, ಇಸಿಒ, ಬಿಐಇಆರ್.ಟಿಗಳು, ನಾಲ್ವರು ಬಿಆರ್.ಸಿಗಳು, ನಾಲ್ವರು ಟಿಪಿಇಒಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ರೇವಣ್ಣ, ಪಿರಿಯಾಪಟ್ಟಣದ ಬಸವರಾಜು, ಕೆ.ಆರ್. ನಗರದ ಕೃಷ್ಣಪ್ಪ, ಎಚ್.ಡಿ. ಕೋಟೆಯ ಮಾದಯ್ಯ, ಬಿಆರ್ಸಿ ಕೆ. ಸಂತೋಷ್ ಕುಮಾರ್ ಇದ್ದರು.