ನರೇಂದ್ರ ಮೋದಿಗೆ ಮತ ಕೇಳುವ ನೈತಿಕತೆಯಿಲ್ಲ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Apr 29, 2024 1:31 AM

ಸಾರಾಂಶ

ಮೇ7 ರಂದು ನಡೆಯುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿಂಧೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಬಹಿರಂಗ ಪ್ರಚಾರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಅಭಿವೃದ್ಧಿ ವಿಷಯ ಮುಂದಿಡದೆ ಬರೀ ಸುಳ್ಳುಗಳನ್ನೇ ಹೇಳುತ್ತಾ ಎರಡು ಬಾರಿ ಪ್ರಧಾನಿಯಾಗಿ ಅಧಿಕಾರ ಅನುಭವಿಸಿರುವ ಪ್ರಧಾನಿ ನರೇಂದ್ರ ಮೋದಿ ಈಗ ಭಾವಾನಾತ್ಮಕವಾಗಿ ಮತ ಕೇಳಲು ಮುಂದಾಗಿದ್ದಾರೆ. ನಿಜ ಹೇಳಬೇಕೆಂದರೆ ಜನರನ್ನು ಮತ ಕೇಳಲು ಅವರಿಗೆ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಸಿಂಧನೂರು, ಮಸ್ಕಿ, ಸಿರಗುಪ್ಪ ತಾಲೂಕುಗಳನ್ನು ಒಳಗೊಂಡ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ಸರ್ವೆ ಪ್ರಕಾರ ದೇಶದಲ್ಲಿ ಬಿಜೆಪಿಗೆ 200 ರಿಂದ 210 ಸೀಟು ಬರುತ್ತವೆ ಎಂದು ಹೇಳಿದ್ದರಿಂದ ಮೋದಿ ಹತಾಶರಾಗಿ ಸಂಪತ್ತು, ಮಂಗಳಸೂತ್ರ, ಮುಸ್ಲಿಮರ ವಿಚಾರಗಳನ್ನು ಹರಿಬಿಟ್ಟು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇವರ ಬಣ್ಣದ ಮಾತುಗಳಿಗೆ ಮೇ7 ರಂದು ನಡೆಯುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

1991 ರಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ತಾವು ಸ್ಪರ್ಧಿಸಿದಾಗ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ತಮಗೆ 19 ಸಾವಿರ ಮತಗಳು ಲೀಡ್ ಆಗಿದ್ದವು. ಹೀಗಾಗಿ, ಸಿಂಧನೂರಿಗೆ ಬಂದರೆ ತಮ್ಮ ತವರು ಕ್ಷೇತ್ರಕ್ಕೆ ಬಂದಷ್ಟೇ ಸಂತೋಷವಾಗುತ್ತದೆ. ಈ ಕ್ಷೇತ್ರದ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಪ್ರಯತ್ನಿಸುತ್ತೇನೆ. ಶಾಸಕ ಹಂಪನಗೌಡ ಬಾದರ್ಲಿ ಮೊದಲಿನಿಂದಲೂ ತಮಗೆ ಬೆಂಬಲಿಸುತ್ತಾ ಬಂದಿದ್ದಾರೆ. ಅವರು ಅತ್ಯಾಪ್ತರಲ್ಲಿ ಒಬ್ಬರು ಎಂದು ಹೇಳಿದರು.

ಬೊಮ್ಮಾಯಿ ಅವಧಿಯಲ್ಲಿ ಮುಸ್ಲಿಂ ಈಸಲಾತಿ ರದ್ದು: ಚಿನ್ನಪ್ಪರೆಡ್ಡಿ ವರದಿ ಆಧರಿಸಿ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಾನೂನು ರಚನೆ ಮಾಡಲಾಯಿತು. ದೇವೇಗೌಡರ ಅವಧಿಯಲ್ಲಿ ಜಾರಿಯಾಯಿತು. ಕಳೆದ 30 ವರ್ಷಗಳಿಂದಲೂ ಮುಸ್ಲಿಮರಿಗೆ ಮೀಸಲಾತಿ ಇದೆ. ಆದರೆ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಮೀಸಲಾತಿ ರದ್ದು ಮಾಡಲಾಯಿತು. ಆದರೆ ಸತ್ಯವನ್ನು ಮರೆಮಾಚಿ ಕಾಂಗ್ರೆಸ್‌ನವರು ಮೀಸಲಾತಿ ರದ್ದುಪಡಿಸಿದ್ದಾರೆ ಎಂದು ಮೋದಿ ಹಸಿ ಸುಳ್ಳು ಹೇಳುತ್ತಾ ಜನರನ್ನು ನಂಬಿಸಲು ಹೊರಟಿದ್ದಾರೆ. ಇದು ಸಾಧ್ಯವಾಗುವುದಿಲ್ಲ. ಜನರಿಗೆ ಇತಿಹಾಸ ಚೆನ್ನಾಗಿ ಗೊತ್ತಿದೆ ಎಂದು ಕುಟುಕಿದರು.

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಶಿವಾಜಿ ಮಹಾರಾಜರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಹೇಳಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಿದ್ದು ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರ ಎಂದು ಅವರ ಕಾರ್ಯಕರ್ತರು ಮೋದಿಗೆ ತಿಳಿಸಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳೇ ಪಕ್ಷದ ಕೈ ಹಿಡಿಯುತ್ತವೆ. ಜೊತೆಗೆ ಮತ್ತೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಎಲ್ಲ ವರ್ಗದ ಹಿತ ಕಾಯುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ನುಡಿದಂತೆ ಕಾಂಗ್ರೆಸ್ ರಾಜ್ಯದಲ್ಲಿ ನಡೆದಿದೆ. ಮುಂದೆ ಕೇಂದ್ರದಲ್ಲಿಯೂ ನಡೆಯಲಿದೆ. ಈ ಬಾರಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರನ್ನು ಗೆಲ್ಲಿಸುವಂತೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಂಸದ ಕರಡಿ ಸಂಗಣ್ಣ, ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.

ಸಣ್ಣನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜ, ಶಾಸಕ ರಾಘವೇಂದ್ರ ಹಿಟ್ನಾಳ, ಆರ್.ಬಸನಗೌಡ ತುರ್ವಿಹಾಳ, ಬಿ.ಎಂ.ನಾಗರಾಜ, ಶರಣಗೌಡ ಬಯ್ಯಾಪುರ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಹಸನಸಾಬ ದೋಟಿಹಾಳ, ಹಂಪಯ್ಯ ನಾಯಕ ಸಾಹುಕಾರ, ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಯಕ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗವೇಣಿ ಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ, ಮುಖಂಡರಾದ ಮಲ್ಲಿಕಾರ್ಜುನ ಯದ್ದಲದಿನ್ನಿ, ಅಶೋಕಭೂಪಾಲ, ಶಿವನಗೌಡ ಗೊರೇಬಾಳ ಇದ್ದರು. ಅನಿಲಕುಮಾರ ವೈ. ನಿರೂಪಿಸಿದರು.

Share this article