ರಾಣಿಬೆನ್ನೂರು: ದೇಶದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಹಲಗೇರಿ ಜನತೆ ಹೋಳಿಗೆ ಊಟ ಸವಿದು ಸಂಭ್ರಮಿಸಿದರು. ಗ್ರಾಮದ ವೀರೇಶ ಉಜ್ಜನಗೌಡ್ರ ಮಾಲೀಕತ್ವದ ಮೋದಿ ಹೋಟೆಲ್‌ನವರು ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12ರಿಂದ ಸಾರ್ವಜನಿಕರಿಗೆ ಜೋಳದ ರೊಟ್ಟಿ, ಎರಡು ಬಗೆಯ ಪಲ್ಯ, ಹೋಳಿಗೆ, ಅನ್ನ-ಸಾಂಬಾರ ಬಡಿಸಿದರು. 4 ಸಾವಿರಕ್ಕೂ ಅಧಿಕ ಜನ ಸರದಿ ಸಾಲಿನಲ್ಲಿ ನಿಂತು ಊಟ ಮಾಡಿದರು.ಮೋದಿ ಪರ ಘೋಷಣೆ: ಊಟ ಬಡಿಸುವ ಸಮಯದಲ್ಲಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಜೈ ಎನ್ನುವ ಘೋಷಣೆ ಮೊಳಗಿದವು.