ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಜಗತ್ತಿನಲ್ಲಿಯೇ ಶಾಂತಿ, ನೆಮ್ಮದಿ, ಸಮಾನತೆ ಇವೆಲ್ಲವನ್ನು ನಾವು ನಮ್ಮ ದೇಶದಲ್ಲಿ ಕಾಣುತ್ತೇವೆ. ಇದಕ್ಕೆ ಕಾರಣ ಈ ದೇಶದಲ್ಲಿ, ನಾಡಿನಲ್ಲಿ ಗುರು ಮತ್ತು ಮಠ ಪರಂಪರೆ ಇದ್ದು, ಅದಕ್ಕೆ ಅದ್ಭುತವಾದ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದ ಕರ್ತೃ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಲಿಂ. ಶ್ರೀಗಳವರ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುಸಿದ್ದೇಶ್ವರ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸೋಮವಾರ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಗುರು ಪರಂಪರೆ, ಮಠ ಪರಂಪರೆಗಳು ನಮ್ಮನ್ನು ಸನ್ಮಾರ್ಗದತ್ತ ಒಯ್ಯುತ್ತವೆ. ಗುಳೇದಗುಡ್ಡದ ಪಟ್ಟಸಾಲಿ ನೇಕಾರ ಶ್ರೀಮಠ ಕ್ರಾಂತಿಕಾರಿ ಮನೋಭಾವನೆಯ ಮಠ. ದೇವರ ದಾಸಿಮಯ್ಯನವರ ಪರಂಪರೆಯಲ್ಲಿ ಈ ಮಠ ಬಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.ಶರಣರ ನಿಜವಾದ ಚಿಂತನೆಗಳು ಅನುಷ್ಠಾನಬೇಕಿದೆ. ನಮ್ಮ ನಾಡಿನಲ್ಲಿರುವ ಮಠಗಳು, ಗುರು ಪರಂಪರೆಗೆ ನಮ್ಮ ಮಠಗಳೇ ಸಾಕ್ಷಿಯಾಗಿವೆ. ಲಕ್ಷಾಂತರ ಭಕ್ತರು ಅವರ ಮಾರ್ಗದರ್ಶನದಲ್ಲಿ ಆದರ್ಶ ಜೀವನವನ್ನು ರೂಢಿಸಿಕೊಂಡು ಬರುತ್ತಿದ್ದಾರೆ. ಇಂದು ದೇಶದಲ್ಲಿ, ಸಮಾಜಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ನಿಲ್ಲಬೇಕಾಗಿದೆ. ದೇಶ, ದೇಶಗಳಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಘಟನೆಗಳು ನಿಲ್ಲಬೇಕಾದರೆ ಅಂತಹ ಶಕ್ತಿ ಸ್ವಾಮೀಜಿಗಳಿಗೆ ಹಾಗೂ ಗುರುಪೀಠಗಳಿಗಿದೆ. ನಾವೆಲ್ಲ ಗುರುಗಳ ಮಾರ್ಗದರ್ಶನದಲ್ಲಿ ಬದುಕನ್ನು ಪಾವನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀಗಳ ಬೇಸರ:ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ನಮ್ಮ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ನಡೆಯುವಂತಹ ಜಗಳ, ಬಳಸುವ ಪದಗಳು, ಮಾಡುವ ಕೃತ್ಯಗಳು, ಅನ್ಯಾಯ, ಮೋಸ ಇವುಗಳನ್ನು ನೋಡಿದರೆ ನಮ್ಮ ರಾಜಕಾರಣಿಗಳು ಎಷ್ಟು ಸಾತ್ವಿಕರಿದ್ದಾರೆಂಬ ಅನುಮಾನ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಠ ಮತ್ತು ರಾಜಕೀಯ ಎರಡೂ ಬೇರೆ ಬೇರೆ ಅಲ್ಲ ಎಂಬುದು ನಮ್ಮ ಭಾವನೆ. ಮಠಗಳು ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಿದರೆ, ರಾಜಕಾರಣಿಗಳು ಮಠಗಳಿಗೆ ಬೇಕಾದ ಅಗತ್ಯಗಳನ್ನು ಪೂರೈಸಬೇಕು. ಅಂದಾಗ ಸಮಾಜ ಒಳ್ಳೆಯ ದಾರಿಗೆ ಹೋಗುತ್ತದೆ. ನೂತನ ಪಟ್ಟಾಧಿಕಾರ ಪಡೆಯುತ್ತಿರುವ ಶ್ರೀಗಳು ಶರಣ ಪರಂಪರೆಯನ್ನು ಪಾಲಿಸಬೇಕು. ನೈತಿಕವಾಗಿ ಗಟ್ಟಿಗರಾಗಿರಬೇಕು. ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.9 ಜೋಡಿಗಳ ವಿವಾಹ:
ಇದೇ ಸಂದರ್ಭದಲ್ಲಿ ಶ್ರೀಮಠದಿಂದ 9 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳು ಜರುಗಿತು. ನವ ದಂಪತಿಗಳು ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಅನೇಶ ಶ್ರೀಗಳವರ ಹಾಗೂ ಗಣ್ಯ ವ್ಯಕ್ತಿಗಳ ಆಶೀರ್ವಾದ ಪಡೆದು ಹಸೆಮಣಿ ಏರಿದರು.ಮಧ್ಯಾಹ್ನ 3 ಗಂಟೆಗೆ ಪಟ್ಟಣದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಆನೆ ಮೇಲೆ ವಚನ ಕಟ್ಟುಗಳ ಮೆರವಣಿಗೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಪಟ್ಟಾಭಿಷೇಕಗೊಂಡ ಗುರುಬಸವ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ, ಆನೆ ಮೇಲೆ ಪಲ್ಲಕ್ಕಿ ಇಟ್ಟು ಅದರ ಒಳಗೆ ವಚನ ಕಟ್ಟುಗಳ ಮೆರವಣಿಗೆ ಮಾಡಲಾಯಿತು. ಕರಡಿ ಮಜಲು, ಡೊಳ್ಳು ಕುಣಿತ, ಮುತ್ತೈದೆಯರಿಂದ ಕುಂಬ ಮೆರವಣಿಗೆ, ಕಳಸದಾರತಿ, ಬಾಜಾ ಭಜಂತ್ರಿ, ಹಲಗೆ ಮಜಲು, ಹೀಹೆ ನಾನಾ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು.
ಈ ವೇಳೆ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಪಿ.ಎಚ್.ಪೂಜಾರ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಡಾ.ವೀರಣ್ಣ ಚರಂತಿಮಠ, ಎಂ.ಡಿ.ಲಕ್ಷ್ಮೀ ನಾರಾಯಣ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬಿ.ಎಸ್.ಸೋಮಶೇಖರ, ರವೀಂದ್ರ ಕಲಬುರ್ಗಿ, ನವೀನ ಚಿಲ್ಲಾಳ, ತೋಟಪ್ಪ ಶೇಖಾ, ಪಿಚ್ಚಂಡಿ, ಶಿವಪ್ಪ ಶೆಟ್ಟರ, ಶೋಭಾ ಮುರಳಿಕೃಷ್ಣ, ಶಿವಲಿಂಗ ಟರ್ಕಿ ಸೇರಿದಂತೆ ಅನೇಕ ಗಣ್ಯರು ಸಮಾರಂಭ ಹಾಗೂ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.40 ಕ್ಕೂ ಹೆಚ್ಚು ಶ್ರೀಗಳ ಸಮಾಗಮ: ಗುರು ಬಸವ ದೇವರ ಪಟ್ಟಾಭೀಷೇಕ ಸಮಾರಂಭಕ್ಕೆ ನಾಡಿನ ವಿವಿಧ ಮಠಗಳಿಂದ ಸುಮಾರು 40 ಕ್ಕೂ ಹೆಚ್ಚು ಶ್ರೀಗಳು ಆಗಮಿಸಿ ಆಶೀರ್ವಾದ ಮಾಡಿ ಶುಭ ಹಾರೈಸಿದರು. ಬೈಲೂರ ನಿಷ್ಕಲ ಮಂಟಪ ಶ್ರೀಜಗದ್ಗುರು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು, ಹಂಪಿಯ ದಯಾನಂದ ಪುರಿ ಶ್ರೀಗಳು, ಹರಿಹರದ ಪದ್ಮಸಾಲಿ ಗುರುಪೀಠದ ಪ್ರಭುಲಿಂಗ ಶ್ರೀಗಳು, ಗದಗ-ಬೆಟಗೇರಿಯ ನೀಲಕಂಠ ಪಟ್ಟದಾರ್ಯ ಶ್ರೀಗಳು, ನೀರಲಕೇರಿ ಘನಲಿಂಗ ಶ್ರೀಗಳು ಸೇರಿದಂತೆ 40ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಮಠಗಳಿಂದ ಆಗಮಿಸಿದ ಶ್ರೀಗಳು ಪಟ್ಟಾಭಿಷೇಕ ಸಮಾರಂಭಕ್ಕೆ ಸಾಕ್ಷಿಯಾದರು. ಕರ್ನಾಟಕ ಒಳಗೊಂಡು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲಾದ ರಾಜ್ಯಗಳ ನೇಕಾರ ಸಮುದಾಯಗಳ ಸಾವಿರಾರು ಭಕ್ತರು ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.