ಕನ್ನಡಪ್ರಭ ವಾರ್ತೆ ಶಿವಮೊಗ್ಗ:
ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯುತ ಕಾಯಕವೆಂಬಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವ ರತ್ನಕುಮಾರಿ, ಕಳೆದ 22 ವರ್ಷದಿಂದ ತೀರ್ಥಹಳ್ಳಿ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿತ್ಯ ಸಂಚಾರ ಮಾಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ರತ್ನಕುಮಾರಿ ಮೂಲತಃ ತೀರ್ಥಹಳ್ಳಿ ಬಳಿಯ ಬೊಮ್ಮರಸಯ್ಯನ ಅಗ್ರಹಾರದವರು. ರಾಮಕೃಷ್ಣ ಐತಾಳ, ಕಮಲಮ್ಮ ದಂಪತಿಯ ಐವರು ಮಕ್ಕಳ ಪೈಕಿ ಕೊನೆಯವರು. ಬಿಕಾಂ, ಟಿಸಿಎಚ್ ಓದಿರುವ ಇವರು ಮೊದಲು ತೀರ್ಥಹಳ್ಳಿ ತಾಲೂಕಿನ ಹಾರೋಗುಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ಕುಟುಂಬ ತೀರ್ಥಹಳ್ಳಿಯಲ್ಲಿ ನೆಲಿಸಿದೆ. ಇವರ ಪತಿ ತೀರ್ಥಹಳ್ಳಿ ತಾಲೂಕಿನ ಆರಗ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯರಾಗಿದ್ದಾರೆ.1996ರಲ್ಲಿ ತೀರ್ಥಹಳ್ಳಿ ತಾಲೂಕಿನ ಹಾರೋಗುಳಿಗೆ ಶಾಲೆಯ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ರತ್ನಕುಮಾರಿ, ಸಮಟಗಾರು ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ 60 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಮಟಗಾರು ಗ್ರಾಮದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಈ ಶಾಲೆಗೆ ಆಗಮಿಸುತ್ತಿದ್ದಾರೆ. ಶಿಕ್ಷಕಿ ರತ್ನಕುಮಾರಿ ಸಮಟಗಾರು ಶಾಲೆಗೆ ವರ್ಗಾವಣೆಗೊಂಡು ಬಂದಾಗ ಆರಂಭದಲ್ಲಿ ಎದುರಾದ ಸವಾಲುಗಳೇ ಆ ಶಾಲೆಯನ್ನು ಸಮುದಾಯ ಮುಖಿಯಾಗಿಸುವ ಕಾರ್ಯಕ್ಕೆ ಪ್ರೇರಣೆಯಾಯಿತು.
ನಿರುಪಯುಕ್ತ ವಸ್ತುಗಳ ಬಳಕೆ, ಚಿನ್ನರ ಲೋಕ, ಮಕ್ಕಳ ಹಸ್ತಪ್ರತಿ, ಕಲಿಕಾ ಸಾಮರ್ಥ್ಯ ಬಿಂಬಿಸುವ ನಲಿ-ಕಲಿ ಕೊಠಡಿ ಮತ್ತು ಕಲಿಕಾ ಚಟುವಟಿಕೆ ಗೋಡೆ, ಮಕ್ಕಳ ಅಂಗಾಂಗಗಳಿಗೆ ಆಯುರ್ವೇದ ಔಷದ ಉಪಯೋಗದ ಮಾಹಿತಿ ನೀಡುವುದು, ಕಾಲಿಡಬ್ಬಗಳಿಂದ ಕಲಿಕೋಪಕರಣ, ನವರಾತ್ರಿ ಗೊಂಬೆ, ಇಂಗ್ಲೀಷ್ ಕುರ್ಚಿ, ಅಂತರ್ಜಾಲ ಬಳಕೆ, ಹೊರಾಂಗಣ ಕಲಿಕೆ, ಕೌಶಲ್ಯಾಭಿವೃದ್ಧಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಮಕ್ಕಳ ಚುನಾವಣಾ ಪ್ರಕ್ರಿಯೆ ಮತ್ತು ಮಕ್ಕಳ ಸಂತೆ ಮೂಲಕ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಿದ್ದಾರೆ.
ಅಲ್ಲದೆ ಮಕ್ಕಳಿಗೆ ಯಕ್ಷಗಾನ, ನಾಟಕ, ಕ್ರೀಡೆ, ಯೋಗ, ಪೋಷಣ್ ಅಭಿಯಾನ ಹಾಗೂ ರಂಗಮಂಟಪದ ಮೂಲಕ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ವಿಶೇಷ ಪೋತ್ಸಾಹ ನೀಡಿ ಊರಿನ ಶಾಲೆಯನ್ನು ಬೇರೆಡೆಗಿಂತ ಭಿನ್ನವಾಗಿ ರೂಪಿಸಿದ ಶ್ರೇಯ ಶಿಕ್ಷಕಿ ರತ್ನಕುಮಾರಿಗೆ ಸಲ್ಲುತ್ತದೆ.
ರತ್ನಕುಮಾರಿಗೆ 2019 -20ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇದಲ್ಲದೆ ತಾಲೂಕು ಮತ್ತು ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಜೊತೆಗೆ 2018- 19ನೇ ಸಾಲಿನ ಇನ್ನೋವೇಟಿವ್ ಟೀಚರ್ ಅವಾರ್ಡ್ ಕೂಡ ಸಿಕ್ಕಿದೆ. ಶಾಲೆಯಲ್ಲಿ ಉತ್ತಮ ಔಷಧ ಹೊಂದಿರುವ ಕಾರಣ 2011-12ರಲ್ಲಿ ಧನ್ವಂತರಿ ಶಾಲೆ ಪ್ರಶಸ್ತಿ ಕೂಡ ಲಭಿಸಿದೆ.