ಚಿತ್ರದುರ್ಗ: 2023ನೇ ಸಾಲಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ನಿಮಿತ್ತ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮ ಅತ್ಯುತ್ತಮವಾಗಿ ಕೈಗೊಂಡಿದ್ದಕ್ಕಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾಪ್ರಭು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಸಾಮಾನ್ಯ ಪ್ರಶಸ್ತಿ ವರ್ಗದಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾಪ್ರಭು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಶಿಖಾ.ಸಿ ಭಾಜನರಾಗಿದ್ದಾರೆ.
ದಿವ್ಯಾಪ್ರಭು ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ಲೈಂಗಿಕ ಅಲ್ಪಸಂಖ್ಯಾತರು, ವಿಶೇಷ ಚೇತನರ ಮತದಾರರ ನೋಂದಣಿ ಹೆಚ್ಚಳ ಸೇರಿದ ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮರಾಗಿ ಗುರುತಿಸಿಕೊಂಡಿದ್ದನ್ನು ಆಯೋಗ ಪ್ರಶಸ್ತಿಗೆ ಪರಿಗಣಿಸಿದೆ.ಆಯೋಗವು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರನ್ನು ಅಭಿನಂದಿಸಲು ಪ್ರತಿ ವರ್ಷ ಸಾಮಾನ್ಯ ವರ್ಗ, ವಿಶೇಷ ವರ್ಗ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳು ಹಾಗೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರಾಜ್ಯ ಎಂದು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಭಾರತ ಚುನಾವಣಾ ಆಯೋಗ ಪ್ರತಿ ವರ್ಷ ನವದೆಹಲಿಯಲ್ಲಿ ಜ.25ರಂದು ಹಮ್ಮಿಕೊಳ್ಳುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದೆ.