ಕನ್ನಡಪ್ರಭ ವಾರ್ತೆ ಮಡಿಕೇರಿ
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ) ಕೊಡಗು ಜಿಲ್ಲಾ ಘಟಕ ಹಾಗೂ ಆಯುಷ್ ಇಲಾಖೆಯ ಆಶ್ರಯದಲ್ಲಿ ಅ.29ರಂದು ಮೇಕೇರಿ ಗ್ರಾಮದ ಶ್ರೀ ಸತ್ಯಸಾಯಿ ಮಂದಿರದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ನಡೆಯಲಿದೆ ಎಂದು ನಿಮಾ ಅಧ್ಯಕ್ಷ ಡಾ.ಎ.ಆರ್.ರಾಜಾರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಆಧುನಿಕತೆಯಲ್ಲಿ ಆಯುರ್ವೇದ’ ಘೋಷವಾಕ್ಯದೊಂದಿಗೆ ನಡೆಯುವ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂದು ಬೆಳಗ್ಗೆ 9.30ಕ್ಕೆ ಧನ್ವಂತರಿ ಹವನದ ಬಳಿಕ ನುರಿತ ಆಯುರ್ವೇದ ವೈದ್ಯರೊಂದಿಗೆ ಸಾರ್ವಜನಿಕರ ಸಂವಾದ ಕಾರ್ಯಕ್ರಮ, ಆಯುರ್ವೇದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ವೈದ್ಯರಿಗೆ ಸನ್ಮಾನ ಮತ್ತು ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.* ಬೆಳ್ಳಿ ಹಬ್ಬಕ್ಕೆ ಚಾಲನೆ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಜಿಲ್ಲಾ ಘಟಕ ಇಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಇದೇ ಸಂದರ್ಭ ಬೆಳ್ಳಿ ಹಬ್ಬದ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಮುಂದಿನ ಒಂದು ವರ್ಷಗಳ ಕಾಲ ವಿವಿಧ ಸ್ತರಗಳಲ್ಲಿ ಸಾರ್ವಜನಿಕರಿಗೆ ಆಯುರ್ವೇದ ಹಾಗೂ ಇನ್ನಿತರ ಭಾರತೀಯ ವೈದ್ಯ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ವಿಶೇಷ ಹಮ್ಮಿಕೊಳ್ಳಲಾಗುತ್ತದೆಂದು ಕಾರ್ಯಕ್ರಮಗಳನ್ನು ಡಾ.ರಾಜಾರಾಂ ತಿಳಿಸಿದರು.ಸಾರ್ವಜನಿಕರಿಗೆ ಸೆಲ್ಪಿ ಸ್ಪರ್ಧೆ: ಆಯುರ್ವೇದ ದಿನಾಚರಣೆ ಅಂಗವಾಗಿ ‘ಹಿತ್ತಲ ಮದ್ದಿನ ಗಿಡಗಳೊಂದಿಗೆ ಸೆಲ್ಫಿ’ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಿರಿಯರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಎನ್ನುವ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಮದ್ದಿನ ಗಿಡದ ಹೆಸರು ಹಾಗೂ ಅದರ ಎದುರು ತಮ್ಮ ಸೆಲ್ಫಿಯನ್ನು ತೆಗೆದು 9886266120 ಈ ಸಂಖ್ಯೆಗೆ ಅ. 28ರ ವರೆಗೆ ಕಳುಹಿಸಿಕೊಡಬಹುದು. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ನೀಡಲಾಗುವುದು ಎಂದರು.
ಆಯುಷ್ ಇಲಾಖಾ ಅಧಿಕಾರಿ ಡಾ. ಶೈಲಜಾ, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಅಧ್ಯಕ್ಷರಾದ ಸೋಮಣ್ಣ ಹಾಗೂ ಸಂಚಾಲಕ ಗಜರಾಜ ನಾಯ್ಡು ಸುದ್ದಿಗೋಷ್ಠಿಯಲ್ಲಿದ್ದರು.